ಕಬಾಬ್ ವ್ಯಾಪಾರಿ ಕೊಲೆ ಪ್ರಕರಣದ ಆರೋಪಿಗೆ  ಪೊಲೀಸರಿಂದ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 26- ಕೊಲೆ ಆರೋಪಿಯೊಬ್ಬ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಹೆಗ್ಗನಹಳ್ಳಿ ನಿವಾಸಿ ಕಿಶೋರ್(28) ಪೊಲೀಸರ ಗುಂಡೇಟಿಗೆ ಗಾಯ ಗೊಂಡಿರುವ ಕೊಲೆ ಆರೋಪಿ. ಹೆಗ್ಗನಹಳ್ಳಿಯ ಶ್ರೀಗಂಧನಗರದ ಕಬಾಬ್ ವ್ಯಾಪಾರಿ ಉಮೇಶ್(32) ಅವರನ್ನು ಇದೇ ತಿಂಗಳ 12ರಂದು ರಾತ್ರಿ ಕಿಶೋರ್ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದ.

ಈ ಬಗ್ಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕಿಶೋರ್‍ನ ನಾಲ್ವರೂ ಸ್ನೇಹಿತರನ್ನು ಬಂಧಿಸಲಾಗಿದ್ದು, ಕಿಶೋರನಿಗಾಗಿ ಪೊಲೀಸರು ಶೋಧ ನಡೆಸಿದ್ದರು.

ಕೊಲೆಯಾಗಿರುವ ಉಮೇಶ್‍ನ ಭಾವಮೈದುನ ಪ್ರದೀಪನಿಗೆ ಮೊನ್ನೆ ಕಿಶೋರ್ ದೂರವಾಣಿ ಕರೆ ಮಾಡಿ ನಿಮ್ಮ ಅಕ್ಕ ಹಾಗೂ ಸಂತೋಷನಿಗೆ ಹುಷಾರಾಗಿರುವಂತೆ ಹೇಳು ಎಂದು ಬೆದರಿಕೆ ಹಾಕಿದ್ದ. ಈ ಬಗ್ಗೆ ಪ್ರದೀಪ್ ರಾಜಗೋಪಾಲನಗರ ಠಾಣೆಗೆ ದೂರು ನೀಡಿದ್ದಾರೆ. ಹಾಗಾಗಿ ಉಮೇಶ್ ಅವರ ಮನೆ ಬಳಿ ಪೊಲೀಸ್ ಕಾವಲು ಹಾಕಲಾಗಿತ್ತು. ರಾತ್ರಿ ಕಿಶೋರ್ ದ್ವಿಚಕ್ರ ವಾಹನದಲ್ಲಿ ಇಲ್ಲಿ ಬಂದು ಹೋಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಕೂಡಲೇ ರಾಜಗೋಪಾಲನಗರ ಠಾಣೆ ಇನ್‍ಸ್ಪೆಕ್ಟರ್ ದಿನೇಶ್ ಪಾಟೀಲ್ ಮತ್ತು ಸಿಬ್ಬಂದಿ, ಕಿಶೋರನ ಶೋಧ ಕಾರ್ಯದಲ್ಲಿದ್ದಾಗ ಇಂದು ಬೆಳಗಿನ ಜಾವ ಪೀಣ್ಯ 2ನೇ ಹಂತದಲ್ಲಿ ಕಿಶೋರ್ ಆಕ್ಟೀವಾ ಹೋಂಡಾದಲ್ಲಿ ಹೋಗುತ್ತಿದ್ದದು ಕಂಡು ತಕ್ಷಣ ಆತನ ಬೆನ್ನತ್ತಿದ್ದಾರೆ.

ಪೀಣ್ಯ 4ನೇ ಹಂತ, ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಬಳಿ ಹೋಗುತ್ತಿದ್ದಾಗ ಸ್ಕೂಟರ್ ಸ್ಕಿಡ್ಡಾಗಿ ಕಿಶೋರ್ ಕೆಳಗೆ ಬಿದ್ದಿದ್ದಾನೆ. ತಕ್ಷಣ ಹೆಡ್ ಕಾನ್‍ಸ್ಟೇಬಲ್ ಶಿವಸ್ವಾಮಿ ಅವರು ಆತನನ್ನು ಹಿಡಿಯಲು ಮುನ್ನುಗ್ಗಿದಾಗ ಆತ ಇವರ ಮೇಲೆ ಹಲ್ಲೆ ಮಾಡಿದ.  ತಕ್ಷಣ ಇನ್‍ಸ್ಪೆಕ್ಟರ್ ದಿನೇಶ್ ಪಾಟೀಲ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆರೋಪಿ ಕಿಶೋರ್ ಜಗ್ಗಿಲ್ಲ. ಆಗ ಇನ್‍ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಕಿಶೋರನ ಬಲಗಾಲಿಗೆ ತಗುಲಿ ಗಾಯಗೊಂಡು ಕುಸಿದುಬಿದ್ದ.

ನಂತರ ಸುತ್ತುವರೆದ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಗಾಯಗೊಂಡಿರುವ ಹೆಡ್ ಕಾನ್‍ಸ್ಟೆಬಲ್ ಶಿವಸ್ವಾಮಿ ಅವರು ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ