ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.21-ನಗರದಲ್ಲಿ ವೃದ್ಧೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಇರಾನಿ ಗ್ಯಾಂಗ್‍ನ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 40 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.  ಮಧ್ಯಪ್ರದೇಶದ ಭೂಪಾಲ್ ನಿವಾಸಿಗಳಾದ ಅಬುಜರ್ ಆಲಿ, ಅಬುಲ್ ಹುಸೇನ್ ಮತ್ತು ಧಾರವಾಡ ಮೂಲದ ಜಿನಿಯಾ ಎಂಬುವರನ್ನು ಧಾರವಾಡದಲ್ಲಿ ಬಂಧಿಸಿದ್ದು, ಈ ತಂಡದಲ್ಲಿ ಇನ್ನು ಹಲವರು ಭಾಗಿಯಾಗಿದ್ದು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದು ಒಂಟಿ ವೃದ್ಧೆಯರನ್ನು ಗುರಿಯಾಗಿರಿಸಿ ಕೊಂಡು ಅಬುಜರ್ ಮತ್ತು ಅಬುಲ್ ಹುಸೇನ್ ಕ್ಷಣಾರ್ಧದಲ್ಲಿ ಸರಣಿ ಸರಗಳ್ಳತನ ನಡೆಸಿ ಪರಾರಿಯಾಗುತ್ತಿದ್ದರು. ಈ ಘಟನೆ ನಾಗರಿಕರನ್ನು ಬೆಚ್ಚಿಬೀಳಿಸಿತ್ತು.  ಇವರಿಬ್ಬರು ಕದ್ದ ಸರಗಳನ್ನು ಆರೋಪಿ ಜಿನಿಯಾಳಿಗೆ ಮಾರಲು ಕೊಡುತ್ತಿದ್ದರು. ಆರೋಪಿಗಳಿಂದ 40 ಲಕ್ಷ ಮೌಲ್ಯದ 1.35 ಕೆಜಿ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ಕೆ.ಆರ್.ಪುರ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣ, ಮಡಿವಾಳ ಮೂರು, ಬಾಣಸವಾಡಿ, ಬಾಗಲೂರು ಠಾಣೆಯ ತಲಾ ಎರಡು ಪ್ರಕರಣ,
ಹಲಸೂರು, ಹಲಸೂರು ಗೇಟ್, ಜ್ಞಾನಭಾರತಿ ವಿದ್ಯಾನಗರ, ವಿವೇಕನಗರ, ಚಾಮರಾಜಪೇಟೆ, ವಯಾಲಿಕಾವಲ್, ಪರಪ್ಪನ ಅಗ್ರಹಾರ, ಸಿದ್ದಾಪುರ  ಮತ್ತು ಕೋಣನಕುಂಟೆ ಠಾಣೆಯ ತಲಾ ಒಂದೊಂದು ಸರಗಳ್ಳತನ ಪ್ರಕರಣ ಸೇರಿ ಒಟ್ಟು 23 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತದೆ.

ಈ ಆರೋಪಿಗಳನ್ನು ಈ ಹಿಂದೆಯೂ ನಗರದಲ್ಲಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಪುನಃ ತಮ್ಮ ಚಾಳಿ ಮುಂದುವರೆಸಿದರು. ಸತತ ಕಾರ್ಯಾಚರಣೆ ಬಳಿಕ ಈ ಆರೋಪಿಗಳನ್ನು ಸಿಸಿಬಿ ಪೊಲೀಸರು ಧಾರವಾಡದಲ್ಲಿ ಬಂಧಿಸಿದ್ದಾರೆ.  ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ಮುದವಿ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಹಜರೇಶ್ ಕಿಲೇದಾರ್ ಹಾಗೂ ಸಿಬ್ಬಂದಿಗಳ ತಂಡ ರಾಜ್ಯದ ವಿವಿಧ ಕಡೆಗಳಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Facebook Comments