ಪ್ರಿಯತಮೆ ಮೇಲೆ ಹಲ್ಲೆ, ಯುವಕ ಪೊಲೀಸ್ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.10- ತನಗೆ ಕೈಕೊಟ್ಟು ಬೇರೊಬ್ಬನೊಂದಿಗೆ ಓಡಾಡುತ್ತಿದ್ದ ಪ್ರಿಯತಮೆ ಮೇಲೆ ಪ್ರಿಯಕರ ಹೆಲ್ಮೆಟ್‍ನಿಂದ ಹಲ್ಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿತೀಯ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 20 ವರ್ಷದ ಯುವತಿಯನ್ನು ಬಬಿತ್ ಎಂಬಾತ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದನು.

ಈ ನಡುವೆ ಕಳೆದ ನಾಲ್ಕೈದು ತಿಂಗಳುಗಳಿಂದ ಈ ಯುವತಿ ಬಬಿತ್‍ನನ್ನು ಬಿಟ್ಟು ರಾಹುಲ್ ಎಂಬಾತನ ಜತೆ ಓಡಾಡುತ್ತಿರುವುದನ್ನು ಗಮನಿಸಿ ಎರಡು-ಮೂರು ಬಾರಿ ಯುವತಿಗೆ ಬಬಿತ್ ಎಚ್ಚರಿಸಿದ್ದನು. ಈತನ ಮಾತನ್ನು ಲೆಕ್ಕಿಸದೆ ಭಾನುವಾರ ರಾಹುಲ್ ಮನೆಗೆ ಯುವತಿ ಹೋಗಿದ್ದಾರೆ. ಈ ವಿಷಯ ತಿಳಿದು ಬಬಿತ್ ತಕ್ಷಣ ರಾಹುಲ್ ಮನೆಗೆ ಹೋಗಿ ಬಾಗಿಲು ತಟ್ಟಿದ್ದಾನೆ.

ರಾಹುಲ್ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಯುವತಿಗೆ ಹೊಡೆದು ಬೈಕ್‍ನಲ್ಲಿ ಕರೆದುಕೊಂಡು ತನ್ನ ಮನೆಗೆ ಬಂದಿದ್ದಾನೆ. ರೂಂನಲ್ಲಿ ಯುವತಿ ಜತೆ ಜಗಳವಾಡಿ ಹೊಡೆದಿದ್ದಾನೆ. ಮನೆಯಲ್ಲಿ ಬಟ್ಟೆ ಒಗೆಯುತ್ತಿದ್ದ ತಾಯಿ ಏನು ಗಲಾಟೆ ಎಂದು ಪ್ರಶ್ನಿಸಿದ್ದಾರೆ.ಈಕೆಗೆ ಬುದ್ಧಿ ಕಲಿಸುತ್ತೇನೆ ಎಂದು ಹೇಳಿ ಏಕಾಏಕಿ ಹೆಲ್ಮೆಟ್‍ನಿಂದ ತಲೆಗೆ ಬಲವಾಗಿ ಹೊಡೆದು ಕಾಲಿನಿಂದ ಒದ್ದಿದ್ದಾನೆ.

ಹಲ್ಲೆಯಿಂದ ಯುವತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಬಬಿತ್ ಯುವತಿ ಪೋಷಕರಿಗೆ ವಿಷಯ ತಿಳಿಸಿದ್ದಾನೆ.ತಕ್ಷಣ ಪೋಷಕರು ಬಂದು ಈಕೆಯನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಹೆಲ್ಮೆಟ್‍ನಿಂದ ಯುವತಿಯ ತಲೆಗೆ ಹೊಡೆದಿದ್ದರಿಂದ ಪೆಟ್ಟಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ಯುವತಿ ನಡೆದ ಘಟನೆಯನ್ನು ತಿಳಿಸಿದ್ದು, ನಿನ್ನೆ ಸೋಲದೇವನಹಳ್ಳಿ ಠಾಣೆಗೆ ಬಬಿತ್ ವಿರುದ್ಧ ದೂರು ನೀಡಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಬಿತ್‍ನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ರಾಹುಲ್‍ನನ್ನು ಸಹ ವಿಚಾರಣೆಗೊಳಪಡಿಸಿದ್ದಾರೆ.

Facebook Comments