ಇಸ್ಪೀಟ್ ಎಲೆಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸುತ್ತಿದ್ದ ಕಿಲಾಡಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.20- ಅಕ್ರಮವಾಗಿ ಮೋಸದಿಂದ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಇಸ್ಪೀಟ್ ಎಲೆಗಳಿಗೆ ಹಾಗೂ ಇನ್ನಿತರ ವಸ್ತುಗಳಿಗೆ ಕ್ಯಾಮೆರಾ, ಸ್ಕ್ಯಾನರ್ ಉಪಕರಣಗಳನ್ನು ಅಳವಡಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಇಮ್ರಾನ್ (29) ಬಂಧಿತ ಆರೋಪಿ.

ಯಶವಂತಪುರದ ಬಿ.ಕೆ.ನಗರದ ಮನೆಯೊಂದರ ಕೆಳಮಹಡಿಯಲ್ಲಿ ಈತ ವಾಸವಾಗಿದ್ದು, ಇಸ್ಪೀಟ್ ಆಟಕ್ಕೆ ಸಂಬಂಧಪಟ್ಟಂತೆ ಮೋಸದಿಂದ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಇಸ್ಪೀಟ್ ಎಲೆಗಳಿಗೆ ಹಾಗೂ ಇನ್ನಿತರ ವಸ್ತುಗಳಿಗೆ ಎಲೆಕ್ಟ್ರಾನಿಕ್ಸ್, ಡಿವೈಸ್‍ಗಳಾದ ಮೈಕ್ರೋ ಕ್ಯಾಮೆರಾ, ಸ್ಕ್ಯಾನರ್, ಹಿಡನ್ ಕ್ಯಾಮೆರಾ ಮುಂತಾದ ಉಪಕರಣಗಳನ್ನು ಅಳವಡಿಸಿ ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿಕೊಂಡಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿದೆ.

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಈತನ ಮನೆ ಮೇಲೆ ದಾಳಿ ಮಾಡಿ ಇಸ್ಪೀಟ್ ಕಾರ್ಡ್‍ಗಳು, 500 ಮುಖ ಬೆಲೆಯ 6 ನೋಟುಗಳು, 100 ರೂ. ಮುಖ ಬೆಲೆಯ ಎರಡು ಕಟ್ಟು, ಇನ್ನಿತರ ವಸ್ತುಗಳು ಸೇರಿದಂತೆ ನಾಲ್ಕು ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಈ ಉಪಕರಣಗಳನ್ನು ಇಸ್ಪೀಟ್ ಎಲೆಗಳಿಗೆ ಅಳವಡಿಸುವುದರಿಂದ ಇಸ್ಪೀಟ್ ಆಟವಾಡುವ ಸಂದರ್ಭದಲ್ಲಿ ಹುಕುಂ ಯಾವ ಕಾರ್ಡ್‍ನಲ್ಲಿ ಇರುತ್ತದೆ ಎಂಬ ಮಾಹಿತಿಯನ್ನು ಉಪಕರಣ ಇಟ್ಟುಕೊಂಡ ವ್ಯಕ್ತಿಗೆ ಹೆಡ್ ಸ್ಪೀಕರ್ ಮೂಲಕ ಗೊತ್ತಾಗುತ್ತದೆ. ಇದರಿಂದ ಸುಲಭವಾಗಿ ಹಣ ಸಂಪಾದಿಸಬಹುದಾಗಿದೆ.

ಆರೋಪಿ ವಿರುದ್ಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇಸ್ಮಾಯಿಲ್ ಮತ್ತು ಪರ್ವಿಂದ್ ಸಿಂಗ್ ಎಂಬಾತನ ಪತ್ತೆ ಕಾರ್ಯ ಮುಂದುವರೆದಿದೆ.

Facebook Comments