ಮನೆ ಬೀಗ ಮೀಟಿ ಕಳ್ಳತನ ಮಾಡುತ್ತಿದ್ದವನ ಬಂಧನ, 10 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.29- ಹಗಲು ಮತ್ತು ರಾತ್ರಿ ವೇಳೆ ಮನೆ ಬೀಗ ಮೀಟಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಿರುವ ಬಾಗಲಗುಂಟೆ ಪೊಲೀಸರು 10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.  ಮೂಲತಃ ತುಮಕೂರು ಜಿಲ್ಲೆ ತಿಪಟೂರಿನ ನಿವಾಸಿ ನಾಗಸಂದ್ರದ ಚನ್ನನಾಯಕನಪಾಳ್ಯದ ಯೋಗೀಶ್ ಅಲಿಯಾಸ್ ಮೈಲಾರಿ(26) ಬಂಧಿತ ಆರೋಪಿ.

ಕಳೆದ ಮಾರ್ಚ್‍ನಲ್ಲಿ ವಿಘ್ನೇಶ್ವರ ಲೇಔಟ್ ನಿವಾಸಿ ಅಶೋಕ್ ನಾಯಕ್ ಎಂಬುವರು ಠಾಣೆಗೆ ಆಗಮಿಸಿ ಕೆಲಸ ನಿಮಿತ್ತ ಪತ್ನಿ ಊರಾದ ಆಂಧ್ರಪ್ರದೇಶಕ್ಕೆ ಮಾರ್ಚ್ 10ರಂದು ತೆರಳಿದ್ದೆ. 14ರ ಬೆಳಗ್ಗೆ ಪಕ್ಕದ ಮನೆಯವರು ದೂರವಾಣಿ ಕರೆ ಮಾಡಿ ನಿಮ್ಮ ಮನೆ ಬಾಗಿಲು ಮೀಟಿದೆ ಎಂದು ತಿಳಿಸಿದ ಕೂಡಲೇ ವಾಪಸ್ ಬಂದು ನೋಡಿದಾಗ ಬೆಡ್‍ರೂಮ್ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕಳವಾಗಿದೆ ಎಂದು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಬಾಗಲಗುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿ 10 ಲಕ್ಷ ಮೌಲ್ಯದ 213 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು, ಸೋಲದೇವನಹಳ್ಳಿಯಲ್ಲಿ 2, ಹಗಲು ಮತ್ತು ರಾತ್ರಿ ಕನ್ನಗಳ್ಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎಸಿಪಿ ಶ್ರೀನಿವಾಸ್‍ರೆಡ್ಡಿ ಮಾರ್ಗದರ್ಶನದಲ್ಲಿ ಬಾಗಲಗುಂಟೆ ಇನ್‍ಸ್ಪೆಕ್ಟರ್ ವೆಂಕಟೇಗೌಡ ಮತ್ತು ಸಿಬ್ಬಂದಿ ವರ್ಗದವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments