ಪೊಲೀಸರ ಸಿನಿಮೀಯ ರೀತಿ ಕಾರ್ಯಾಚರಣೆ, ಇಬ್ಬರು ಸರಗಳ್ಳರಿಗೆ ಗುಂಡೇಟು
ಬೆಂಗಳೂರು,ಆ.31- ನಡೆದು ಹೋಗುತ್ತಿದ್ದ ಮಹಿಳೆಯ ಸರ ಅಪಹರಿಸಿ ಪರಾರಿಯಾಗುತ್ತಿದ್ದ ಇಬ್ಬರು ಸರಗಳ್ಳರನ್ನು ಪೊಲೀಸರು ಬೆನ್ನಟ್ಟಿ ಹಾರಿಸಿದ ಗುಂಡೇಟು ತಗುಲಿ ಸಿಕ್ಕಿಬಿದ್ದಿದ್ದಾರೆ.
ಉತ್ತರಪ್ರದೇಶ ಮೂಲದ ಸುಭಾಷ್(30) ಮತ್ತು ಪಂಜಾಬ್ ಮೂಲದ ಸಂಜಯ್(31) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಸರಗಳ್ಳರು. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ 5.45ರ ಸುಮಾರಿನಲ್ಲಿ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ಪೆÇಲೀಸ್ ಠಾಣೆ ಸರ್ಕಲ್ ಬಳಿ ಮಹಿಳೆ ಯೊಬ್ಬರು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಈ ಇಬ್ಬರು ಸರಗಳ್ಳರು ಮಹಿಳೆಯ ಸರ ಎಗರಿಸಿ ಬೈಕ್ನಲ್ಲಿ ಪರಾರಿಯಾಗುತ್ತಿದ್ದರು. ಇದನ್ನು ಗಮನಿಸಿದ ಆಟೋ ಚಾಲಕರೊಬ್ಬರು ತಕ್ಷಣ ಪೊಲೀಸ್ ಕಂಟ್ರೋಲ್ರೂಮ್ಗೆ ತಿಳಿಸಿದ್ದಾರೆ.
ಕಂಟ್ರೋಲ್ರೂಮ್ನಿಂದ ಈ ಮಾಹಿತಿ ಎಲ್ಲ ಪೊಲೀಸ್ ಠಾಣೆಗಳಿಗೂ ರವಾನೆಯಾಗಿದೆ. ಈ ವೇಳೆ ಬೆಳಗಿನ ಜಾವ ರೌಂಡ್ಸ್ನಲ್ಲಿದ್ದ ರಾಜಾಜಿನಗರ ಇನ್ಸ್ಪೆಕ್ಟರ್ ವೆಂಕಟೇಶ್ ಅವರಿಗೆ ಮಾಹಿತಿ ತಿಳಿದು ಜೀಪ್ನಲ್ಲಿ ಸರಗಳ್ಳರ ಬೆನ್ನಟ್ಟಿದ್ದಾರೆ. ಆರೋಪಿಗಳು ಇಸ್ಕಾನ್ ಬಳಿ ಹೋಗುತ್ತಿರುವ ಬಗ್ಗೆ ಅತ್ತ ಶ್ರೀರಾಮಪುರ ಠಾಣೆ ಸಬ್ಇನ್ಸ್ಪೆಕ್ಟರ್ ವಿನೋದ್ ನಾಯಕ್ ಅವರಿಗೆ ತಿಳಿದು ಅವರು ಸಹ ಬೈಕ್ನಲ್ಲಿ ಎದುರು ದಿಕ್ಕಿನಿಂದ ಬರುತ್ತಿದ್ದರು.
ಆರೋಪಿಗಳು ಹೋಗುತ್ತಿದ್ದ ಬೈಕ್ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿರ್ಲೋಸ್ಕರ್ ಲೇಔಟ್ ಬಳಿ ಉರುಳಿಬಿದ್ದಿದೆ.
ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ್ದ ರಾಜಾಜಿನಗರ ಹೆಡ್ ಕಾನ್ಸ್ಟೆಬಲ್ ದಯಾಳ್ ಕುಮಾರ್, ಎಎಸ್ಐ ಜಗದೀಶ್, ಸರಗಳ್ಳರನ್ನು ಹಿಡಿಯಲು ಹೋದಾಗ ಚಾಕುವಿನಿಂದ ಇವರಿಬ್ಬರ ಕೈಗೆ ಇರಿದು ಪರಾರಿಯಾಗಲು ಯತ್ನಿಸುತ್ತಾರೆ.
ತಕ್ಷಣ ರಾಜಾಜಿನಗರ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ ಮತ್ತು ಶ್ರೀರಾಮಪುರ ಠಾಣೆ ಸಬ್ಇನ್ಸ್ಪೆಕ್ಟರ್ ವಿನೋದ್ ನಾಯಕ್ ಅವರು ಆರೋಪಿಗಳಿಗೆ ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸುತ್ತಾರೆ.
ಇನ್ಸ್ಪೆಕ್ಟರ್ ಮತ್ತು ಸಬ್ಇನ್ಸ್ಪೆಕ್ಟರ್ ಅವರ ಮಾತಿಗೆ ಕಿವಿಗೊಡದೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ವೆಂಕಟೇಶ್ ಅವರು ಹಾರಿಸಿದ ಗುಂಡು ಒಬ್ಬನ ಕಾಲಿಗೆ ತಗುಲಿದೆ.
ಅತ್ತ ಶ್ರೀರಾಮಪುರ ಠಾಣೆ ಸಬ್ಇನ್ಸ್ಪೆಕ್ಟರ್ ಹಾರಿಸಿದ ಗುಂಡು ಮತ್ತೊಬ್ಬನ ಕಾಲಿಗೆ ತಗುಲಿದೆ. ಕುಸಿದುಬಿದ್ದ ಇಬ್ಬರು ಸರಗಳ್ಳರನ್ನು ತಕ್ಷಣ ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡಿರುವ ಹೆಡ್ಕಾನ್ಸ್ಟೆಬಲ್ ದಯಾಳ್ ಕುಮಾರ್ ಮತ್ತು ಎಎಸ್ಐ ಜಗದೀಶ್ ಅವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಬೆಂಗಳೂರುನಗರದ ಸಂಜಯನಗರ, ಕಾಮಾಕ್ಷಿಪಾಳ್ಯ, ಮಾಗಡಿರಸ್ತೆ, ಬಗಲಗುಂಟೆ ಮತ್ತಿತರ ಕಡೆ ಹೆಚ್ಚಾಗಿ ಸರಗಳ್ಳತನ ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿತ್ತು. ಹೀಗಾಗಿ ಸಂಜೆ ಮತ್ತು ಬೆಳಗಿನ ಜಾವ ರೌಂಡ್ಸ್ ಮಾಡುವಂತೆ ಡಿಸಿಪಿ ಅವರು ಎಲ್ಲಾ ಠಾಣೆ ಇನ್ಸ್ಪೆಕ್ಟರ್ಗಳಿಗೆ ಸೂಚಿಸಿದ್ದರು.
ಅದರಂತೆ ಇಂದು ಬೆಳಗ್ಗೆ ರಾಜಾಜಿನಗರ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ ಅವರು ರೌಂಡ್ಸ್ನಲ್ಲಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸ್ಥಳಕ್ಕೆ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಿಳೆಯ ಸರ ಅಪಹರಿಸಿ ಪರಾರಿಯಾಗುತ್ತಿದ್ದ ಇಬ್ಬರನ್ನು ಇನ್ಸ್ಪೆಕ್ಟರ್ ಹಾಗೂ ಸಬ್ಇನ್ಸ್ಪೆಕ್ಟರ್ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಅವರು ಈ ಸಂಜೆಗೆ ತಿಳಿಸಿದ್ದಾರೆ.