ಮನೆಗೆ ನುಗ್ಗಿ ಮಹಿಳೆ ಕಟ್ಟಿ ಹಾಕಿ ಚಿನ್ನಾಭರಣ ದೋಚಿದ್ದ ದುಷ್ಕರ್ಮಿಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.4- ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಸಾಲ ಹೆಚ್ಚಾಗಿದ್ದರಿಂದ ಒಂಟಿ ಮಹಿಳೆಯ ಮನೆಗೆ ನುಗ್ಗಿ ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಸುತ್ತಿ ಹಣ, ಆಭರಣಗಳನ್ನು ದೋಚಿ ಪರಾರಿಯಾಗಿದ್ದ ತಮಿಳುನಾಡು ಮೂಲದ ಮೂವರನ್ನು ಕೆ.ಆರ್.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು, ಧರ್ಮಪುರಿ ಜಿಲ್ಲೆಯ ಶಿವಕುಮಾರ ಅಲಿಯಾಸ್ ಮನೋಜ್(37), ಸಿದ್ದಾರ್ಥ ಅಲಿಯಾಸ್ ಸಿದ್ದ(25) ಮತ್ತು ಡೇವಿಡ್ ಅಲಿಯಾಸ್ ಬುದ್ದ ನೇಷನ್(32) ಬಂಧಿತ ಆರೋಪಿಗಳು.

ಈ ಮೂವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಕಳೆದ ಆಗಸ್ಟ್ 19ರಂದು ಮಧ್ಯಾಹ್ನ 1 ಗಂಟೆ ಸಂದರ್ಭದಲ್ಲಿ ಬೈಕ್‍ನಲ್ಲಿ ಬಂದ ಆರೋಪಿಗಳು ಕೊರಿಯರ್ ಡೆಲಿವರಿ ಮಾಡುವ ನೆಪದಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆಯ ಮನೆ ಬಾಗಿಲನ್ನು ತಟ್ಟಿದ್ದಾರೆ. ಮಹಿಳೆ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಒಳಗೆ ನುಗ್ಗಿ ಬಾಗಿಲು ಬಂದ್ ಮಾಡಿ ಡ್ರಾಗರ್‍ನಿಂದ ಹೆದರಿಸಿ ಕೈ-ಕಾಲು ಕಟ್ಟಿ ಕಿರುಚದಂತೆ ಬಾಯಿಗೆ ಕರ್ಚಿಪ್ ತುಂಬಿ ಪ್ಲಾಸ್ಟರ್ ಸುತ್ತಿದ್ದಾರೆ.

ನಂತರ ಮನೆಯನ್ನೆಲ್ಲ ಜಾಲಾಡಿದ ಆರೋಪಿಗಳು ಕೈಗೆ ಸಿಕ್ಕಿದ 1.60 ಲಕ್ಷ ನಗದು, 170 ಗ್ರಾಂ ಚಿನ್ನದ ಆಭರಣಗಳು, ತಾಳಿ ಸಮೇತ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಕೆ.ಆರ್.ಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಮೂವರು ಆರೋಪಿಗಳನ್ನು ತಮಿಳುನಾಡಿನ ಜೋಲಾರಪೇಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಶಿವಕುಮಾರ್ ಐಡಿಎಫ್‍ಸಿ ಬ್ಯಾಂಕ್‍ನಲ್ಲಿ ಫೀಲ್ಡ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದು, ಆ ಸಂದರ್ಭದಲ್ಲಿ ಬಾಲಾಜಿ ಎಂಬ ವ್ಯಕ್ತಿಯ ಪರಿಚಯವಾಗಿದೆ.  ಬಾಲಾಜಿ ಅವರ ಮನೆಗೆ ಆಗಾಗ್ಗೆ ಹೋಗಿಬರುತ್ತಿದ್ದ ಶಿವಕುಮಾರ್ 10 ಲಕ್ಷ ಲೋನ್ ಕೊಡಿಸಬೇಕೆಂದು ಕೇಳಿದ್ದಾನೆ. ಬಾಲಾಜಿಯು ತನ್ನ ಮನೆಯ ಎದುರಿನಲ್ಲಿ ವಾಸಗಿದ್ದ ಎಲ್‍ಐಸಿ ಹೌಸಿಂಗ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಅವರನ್ನು ಪರಿಚಯಿಸಿಕೊಡುತ್ತಾರೆ.

ಶಿವಕುಮಾರ್ ಸಾಲ ಮಾಡಿಕೊಂಡಿದ್ದು ಲಾಕ್‍ಡೌನ್ ಸಮಯದಲ್ಲಿ ಯಾವುದೇ ಕೆಲಸ ಇಲ್ಲದೇ ಇರುವುದರಿಂದ ಸಾಲ ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ ಲೋನ್ ಕೊಡಿಸಲು ತನಗೆ ಪರಿಚಯವಿದ್ದ ಭಾಸ್ಕರ್ ಅವರನ್ನು ಭೇಟಿ ಮಾಡಿದ್ದಾನೆ.  ಭಾಸ್ಕರ್ ಅವರು ದಾಖಲಾತಿಗಳನ್ನು ಕೇಳಿದ್ದಾರೆ.

ದಾಖಲಾತಿ ಪಡೆದು ಲೋನ್ ಮಾಡಿಕೊಡದಿದ್ದರಿಂದ ಭಾಸ್ಕರ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದನು. ಭಾಸ್ಕರ್ ಅವರ ಮನೆಯಲ್ಲಿ ಅವರ ಪತ್ನಿ ಒಬ್ಬರೇ ಇರುವುದನ್ನು ಗಮನಿಸಿ ಆ.18ರಂದು ತನ್ನ ಸ್ನೇಹಿತ ಡೇವಿಡ್ ಮನೆಯಲ್ಲಿ ಪಾರ್ಟಿ  ಮಾಡಿ ಸಿದ್ದಾರ್ಥನೊಂದಿಗೆ ಭಾಸ್ಕರನ ಮನೆಗೆ ನುಗ್ಗಿ ಹಣ ಆಭರಣಗಳನ್ನು ದೋಚುವ ಸಂಚು ಹೂಡುತ್ತಾರೆ.

ಅದರಂತೆ ಆ.19ರಂದು ಕೊರಿಯರ್ ಬಾಯ್ ನೆಪದಲ್ಲಿ ಈ ಮೂವರು ಸೇರಿಕೊಂಡು ಅವರ ಮನೆಗೆ ನುಗ್ಗಿ 4 ಚಿನ್ನದ ಬಳೆಗಳು, 2 ಜೊತೆ ಕಿವಿಯೋಲೆ, 4 ಉಂಗುರ, ಕರಿಮಣಿ ಸರ, ಬಂಗಾರದ ಚೈನ್, ಮಾಂಗಲ್ಯ ಸರ, ಬೆಳ್ಳಿ ಕಾಲ್ಬೈನ್ ಸೇರಿ 170 ಗ್ರಾಂ. ತೂಕದ 6.50 ಲಕ್ಷ ಮೌಲ್ಯದ ಆಭರಣಗಳನ್ನು ದೋಚಿದ್ದರು.  ಇದೀಗ ಕೆ.ಆರ್.ಪುರಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments