ಫಾರ್ಚುನರ್ ಕಾರು ಕದ್ದಿದ್ದ ಖದೀಮ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.5- ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಫಾರ್ಚುನರ್ ಕಾರನ್ನು ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 22 ಲಕ್ಷ ಬೆಲೆಯ ಕಾರನ್ನು ವಶಪಡಿಸಿಕೊಂಡಿದ್ದಾರೆ. ಚನ್ನಸಂದ್ರ ನಿವಾಸಿ ಭರತ್ (24) ಬಂಧಿತ ಆರೋಪಿ.

ಆ.6ರಂದು ಸಂಜೆ 6.30ರಂದು ಜೆ.ಸಿ.ರಸ್ತೆಯ ಬಿಬಿಎಂಪಿ ಪಾರ್ಕಿಂಗ್ ಸ್ಥಳದಲ್ಲಿ 15 ಲಕ್ಷ ಬೆಲೆಯ ಕಾರನ್ನು ನಿಲ್ಲಿಸಲಾಗಿತ್ತು. ಆ.9ರಂದು ಮಧ್ಯಾಹ್ನ 2.30ರಲ್ಲಿ ಕಾರಿನ ಮಾಲೀಕ ತಬ್ರೇಜ್ ಅಹಮದ್ ಎಂಬುವರು ಬಂದು ನೋಡಿದಾಗ ಕಾರು ನಾಪತ್ತೆಯಾಗಿತ್ತು.

ತಕ್ಷಣ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ 22 ಲಕ್ಷ ರೂ. ಮೌಲ್ಯದ ಫಾರ್ಚುನರ್‍ಕಾರು, ಎರಡು ಎನ್‍ಫೀಲ್ಡ್ ಬೈಕ್ ಹಾಗೂ ಬೆನೆಲ್ಲಿ ಎಂಬ ಮತ್ತೊಂದು ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಈತ ಬೀದಿಬದಿ ವ್ಯಾಪಾರಿಗಳ ಬಳಿ ಗ್ರಾಹಕರಂತೆ ನಟಿಸಿ, ತನ್ನ ಬಳಿ ಮೊಬೈಲ್‍ನಲ್ಲಿ ಕರೆನ್ಸಿ ಇಲ್ಲವೆಂದು ನಂಬಿಸಿ ಅವರ ಮೊಬೈಲ್ ಪಡೆದು ಆ ಮೂಲಕ ಓಎಲ್‍ಎಕ್ಸ್‍ನಲ್ಲಿ ವಾಹನದ ಮಾಲೀಕರನ್ನು ಸಂಪರ್ಕಿಸುತ್ತಿದ್ದನು.

ನಂತರ ವಾಹನ ಖರೀದಿಸುವವನಂತೆ ಬಂದು ಟ್ರಯಲ್ ನೋಡಿದ ನಂತರ ಪುನಃ ಬರುವುದಾಗಿ ಮಾಲೀಕರಿಗೆ ಹೇಳಿ ವಾಹನದ ಕೀ ಕೊಡುವಾಗ ಗೊತ್ತಾಗದಂತೆ ನಕಲಿ ಕೀ ಕೊಟ್ಟು ವಾಪಸ್ ಹೋಗುತ್ತಿದ್ದನು.

ಮಾರನೆ ದಿನ ವಾಹನ ಕಳವು ಮಾಡಿ ಹೋಗುತ್ತಿದ್ದನು. ಈತನ ಬಂಧನದಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಕಾರು, ಜೆ.ಸಿ.ನಗರ, ಮಹದೇವಪುರ, ತಮಿಳುನಾಡಿನ ಹೊಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments