ಸುಲಿಗೆಕೋರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11- ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಬೀಳಿಸಿ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸುಲಿಗೆಕೋರರನ್ನು ಬಂಧಿಸಿದ್ದಾರೆ.  ನಿನ್ನೆ ಮಧ್ಯಾಹ್ನ 12.30ರಲ್ಲಿ ಪುಲಿಕೇಶಿನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಲ್ಸ್ ಪಾರ್ಕ್ ಸಿಬ್ಬಂದಿ ಹೇಮಂತ್‍ಕುಮಾರ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಸಂದರ್ಭದಲ್ಲಿ ಅಪಾಚಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸುಲಿಗೆಕೋರರು ಮತ್ತೊಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಬೀಳಿಸಿ ಅವರ ಬ್ಯಾಗ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ತಕ್ಷಣ ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಹೇಮಂತ್ ಕುಮಾರ್ ಅವರು ಸಿಬ್ಬಂದಿ ನಾಗೇಂದ್ರ ಅವರೊಂದಿಗೆ ಸುಲಿಗೆಕೋರರ ಬೆನ್ನಟ್ಟಿದ್ದಾರೆ.

ಪೊಲೀಸರು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಗಮನಿಸಿದ ಆರೋಪಿಗಳಿಬ್ಬರು ತಮ್ಮ ವಾಹನ ಹಾಗೂ ಮಹಿಳೆಯ ಬ್ಯಾಗ್‍ನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು.  ಬಳಿಕ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಅಪಾಚಿ ವಾಹನದ ನೋಂದಣಿ ಸಂಖ್ಯೆ ಆಧಾರದ ಮೇರೆಗೆ ಮಾಲೀಕರನ್ನು ಪತ್ತೆ ಮಾಡಿ ಅವರ ವಾಹನವನ್ನು ಉಪಯೋಗಿಸಿಕೊಂಡು ಕೃತ್ಯವೆಸಗಿದ್ದ ಆಸೀಫ್ ಮತ್ತು ತೌಸೀಫ್‍ನನ್ನು ಬಂಧಿಸಿದ್ದಾರೆ. ಆರೋಪಿಗಳು ಬ್ಯಾಗ್‍ನ್ನು ಕಿತ್ತುಕೊಳ್ಳುವಾಗ ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಹಿಳೆಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.

ಸಾರ್ವಜನಿಕರ ಪ್ರಶಂಸೆ: ಸಂಚಾರ ದಟ್ಟಣೆಯ ನಿರ್ವಹಣೆ ಸಮಯದಲ್ಲೂ ಸಂಚಾರ ಪೊಲೀಸರು ತೋರಿದ ಧೈರ್ಯ, ಸಮಯ ಪ್ರಜ್ಞೆ, ಕರ್ತವ್ಯಪಾಲನೆ ಮತ್ತು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ ಚಾಣಾಕ್ಷತೆ ಬಗ್ಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ. mಸಂಚಾರಿ ಪೊಲೀಸರ ಈ ಗುರುತರ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಶ್ಲಾಘಿಸಿ ಪುರಸ್ಕರಿಸಿರುತ್ತಾರೆ.

Facebook Comments