ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿ ಆರೋಪಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಕೊಲೆ ಯತ್ನ ಪ್ರಕರಣದ ಆರೋಪಿ ಆತ್ಮರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡು ಕಾಲಿಗೆ ತಗುಲಿ ಸಿಕ್ಕಿ ಬಿದ್ದಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಡಿಜೆ ಹಳ್ಳಿಯಿಂದ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಬಿದರುಕಲ್ಲಿಗೆ ನಿವಾಸ ಬದಲಾಯಿಸಿರುವ ಗ್ರಾನೈಟ್ ಶಿಫ್ಟ್ ಕೆಲಸ ಮಾಡುವ ಪ್ರೇಮ್ ಕುಮಾರ್ (30) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ.

ಆರೋಪಿ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್.ಆರ್. ಬಂಡೆ ಸಮೀಪ ಇರುವ ಮಾಹಿತಿ ಮೇರೆಗೆ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ನಾಗದೇವ್, ಹೆಡ್‍ಕಾನ್‍ಸ್ಟೇಬಲ್ ರಂಗನಾಥ್ ಮತ್ತವರ ಸಿಬ್ಬಂದಿ ಇಂದು ಮುಂಜಾನೆ 5.15ರ ಸಂದರ್ಭದಲ್ಲಿ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಲು ಯತ್ನಿಸಿದರು.

ಈ ಸಂದರ್ಭದಲ್ಲಿ ಪ್ರೇಮ್‍ಕುಮಾರ್ ಹೆಡ್‍ಕಾನ್‍ಸ್ಟೇಬಲ್ ರಂಗನಾಥ್ ಅವರ ಮೇಲೆ ಡ್ರ್ಯಾಗರ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ.

ಎಸ್‍ಐ ನಾಗದೇವ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಆರೋಪಿ ಮತ್ತೆ ದಾಳಿ ಮಾಡಲು ಮುಂದಾದಾಗ ಆತ್ಮ ರಕ್ಷಣೆಗಾಗಿ ಹಾರಿಸಿದ ಗುಂಡು ಆತನ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.  ಗುಂಡೇಟಿನಿಂದ ಗಾಯಗೊಂಡಿರುವ ಪ್ರೇಮಕುಮಾರ್‍ನನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯಿಂದ ಹಲ್ಲೆಗೊಳಗಾಗಿರುವ ಹೆಡ್‍ಕಾನ್‍ಸ್ಟೇಬಲ್ ರಂಗನಾಥ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ: ಕಳೆದ 8ನೆ ತಾರೀಖಿನ ರಾತ್ರಿ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಎಚ್‍ಬಿ ಮುಖ್ಯ ರಸ್ತೆಯಲ್ಲಿರುವ ವಿನುತ ಬಾರ್‍ನಲ್ಲಿ ದೀಪಕ್ ಮತ್ತು ಕಪಿಲ್ ಹಾಗೂ ಶಿವ ಮತ್ತು ಪ್ರೇಮ್‍ಕುಮಾರ್ ಅವರ ನಡುವೆ ಕುಡಿದ ಮತ್ತಿನಲ್ಲಿ ಜಗಳವಾಗಿತ್ತು. ಬಾರಿನಿಂದ ಹೊರ ಬಂದಾಗಲೂ ಪರಸ್ಪರ ಮಾತಿಗೆ ಮಾತು ಬೆಳೆದು ಪ್ರೇಮ್‍ಕುಮಾರ್ ಮತ್ತು ಶಿವ , ದೀಪಕ್ ಮತ್ತು ಕಪಿಲ್ ಅವರ ಮೇಲೆ ಚಾಕು ಮತ್ತು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಸ್ಥಳೀಯರು ಜಗಳ ಬಿಡಿಸಿ ತೀವ್ರವಾಗಿ ಗಾಯಗೊಂಡಿದ್ದ ದೀಪಕ್ ಮತ್ತು ಕಪಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಡಿ.ಜೆ.ಹಳ್ಳಿ ಪೊಲೀಸರು ನಿನ್ನೆ ರಾತ್ರಿ ಆರೋಪಿ ಶಿವ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು.

ಈ ಸಂದರ್ಭದಲ್ಲಿ ಶಿವ ಮತ್ತೊಬ್ಬ ಆರೋಪಿ ಪ್ರೇಮ್‍ಕುಮಾರ್ ಬಗ್ಗೆ ನೀಡಿದ ಮಾಹಿತಿ ಮೇರೆಗೆ ಇಂದು ಮುಂಜಾನೆ ಪ್ರೇಮ್‍ಕುಮಾರ್‍ನನ್ನು ಬಂಧಿಸಲು ಪೊಲೀಸರು ಮುಂದಾದಾಗ ಈ ಘಟನೆ ನಡೆದಿದೆ.

Facebook Comments