ಕಲಾಸಿಪಾಳ್ಯದಲ್ಲಿ ಕ್ಷುಲ್ಲಕ ವಿಚಾರಕ್ಕೆ ಚಾಲಕನ ಬರ್ಬರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.20- ಕ್ಷುಲ್ಲಕ ವಿಚಾರಕ್ಕೆ ಗುಂಪೊಂದು ಚಾಲಕನೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಲಾಸಿಪಾಳ್ಯದ ಜೆ.ಸಿ.ರೋಡ್‍ನ ಸಿಮೆಂಟ್ ರಸ್ತೆ ನಿವಾಸಿ ಆನಂದ್(32) ಕೊಲೆಯಾದ ವ್ಯಕ್ತಿ.

ಟಾಟಾ ಏಸ್ ವಾಹನದ ಚಾಲಕನಾಗಿದ್ದ ಆನಂದ್ ರಾತ್ರಿ 10.15ರಲ್ಲಿ ಹೊಸ ಬಡಾವಣೆಯ 4ನೇ ಕ್ರಾಸ್‍ನಲ್ಲಿನ ಟೆಂಪೊ ನಿಲ್ದಾಣದ ಬಳಿ ಇರುವ ಟೀ ಅಂಗಡಿಯಲ್ಲಿ ಸ್ನೇಹಿತರೊಂದಿಗೆ ಟೀ ಕುಡಿದುಕೊಂಡು ಮಾತನಾಡುತ್ತಾ ನಿಂತಿದ್ದರು.

ಈ ಸಂದರ್ಭದಲ್ಲಿ ಆನಂದ್ ಅವರ ಮಗ ಇವರ ಬಳಿ ಬಂದು ಯಾವುದೋ ವಿಷಯ ತಿಳಿಸಿದ್ದಾನೆ. ಈ ನಿಮಿತ್ತ ಆನಂದ್ ಅವರು ಸ್ನೇಹಿತರ ಜೊತೆ ಮಗನನ್ನು ಕರೆದುಕೊಂಡು ಮನೆಕಡೆ ಬರುತ್ತಿದ್ದಾಗ, ಇಬ್ಬರು ಬೈಕ್‍ನಲ್ಲಿ ಬಂದು ಆನಂದ್ ಜೊತೆ ಜಗಳವಾಡಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿ ಮಾತಿಗೆ ಮಾತು ಬೆಳೆದಾಗ ಆನಂದ್ ಜೊತೆಗಿದ್ದ ಒಬ್ಬ ಬೈಕ್ ಸವಾರನಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಬೈಕ್ ಸವಾರರು ವಾಪಸ್ ಹೋಗಿ ಮತ್ತೆ ಕೆಲವರನ್ನು ಕರೆದುಕೊಂಡು ಬಂದು ಜಗಳವಾಡಿದ್ದಾರೆ.

ಈ ವೇಳೆ ಗುಂಪಿನಲ್ಲಿದ್ದವರ ಪೈಕಿ ಒಬ್ಬಾತ ಚಾಕುವಿನಿಂದ ಆನಂದ್ ಎದೆಗೆ ಬಲವಾಗಿ ಇರಿದಿದ್ದಾನೆ. ಆನಂದ್ ಕುಸಿದು ಬೀಳುತ್ತಿದ್ದಂತೆ ಗುಂಪು ಸ್ಥಳದಿಂದ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡ ಆನಂದ್ ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರಾದರೂ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಘಟನೆ ಸುದ್ದಿ ತಿಳಿದು ಕಲಾಸಿಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದೆ.

Facebook Comments