ಆಗ್ನೇಯ ವಿಭಾಗದ ಪೊಲೀಸರ ಕಾರ್ಯಾಚರಣೆ : 22 ಲಕ್ಷ ಮೌಲ್ಯದ ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಆಗ್ನೇಯ ವಿಭಾಗದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅಂತಾರಾಜ್ಯ ಮೂಲದ 9 ಮಂದಿ ಆರೋಪಿಗಳನ್ನು ಬಂಧಿಸಿ 22 ಲಕ್ಷ ಮೌಲ್ಯದ 57 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬೈಕ್ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಮನೋಹರ್(29) ಜೈಲಿನಲ್ಲಿದ್ದಾಗ ಈ ಮೊದಲೇ ಗಾಂಜಾ ಪ್ರಕರಣದಲ್ಲಿ ಜೈಲು ಸೇರಿದ್ದ ವಿಶಾಖಪಟ್ಟಣದ ಕೃಪಾನಂದ ಮತ್ತು ಪಾರ್ಥ ಎಂಬುವರ ಪರಿಚಯ ಮಾಡಿಕೊಂಡಿದ್ದ.

ನಂತರ ಬೈಕ್ ಕಳ್ಳತನಗಳಿಂದ ಕಡಿಮೆ ಹಣ ಸಿಗುತ್ತದೆ ಎಂದು ಗಾಂಜಾ ಮಾರಾಟ ಮಾಡಿದರೆ ಹೆಚ್ಚಿನ ಹಣ ಸಂಪಾದಿಸಬಹುದೆಂದು ಯೋಜನೆ ರೂಪಿಸಿಕೊಂಡು ಕಳೆದ ಜೂನ್‍ನಲ್ಲಿ ಜೈಲಿನಿಂದ ಬಿಡುಗಡೆಯಾಗಿ ತನ್ನದೇ ಆದ ತಂಡವನ್ನು ಮನೋಹರ್ ಕಟ್ಟಿಕೊಂಡಿದ್ದನು.

ವಿಶಾಖಪಟ್ಟಣದ ಕೃಪಾನಂದ ಮತ್ತು ಪಾರ್ಥ 8 ಸಾವಿರ ರೂ.ಗೆ ಒಂದು ಕೆಜಿ ಗಾಂಜಾ ಖರೀದಿ ಮಾಡಿ ಬೆಂಗಳೂರಿನ ಸುತ್ತಮುತ್ತ ಹಾಗೂ ತಮಿಳುನಾಡಿನ ವಿವಿಧ ಕಡೆ ಬಾಲರಾಜ್ ಮತ್ತು ಇತರರೊಂದಿಗೆ ಸೇರಿ ಕೆಜಿಗೆ 20 ಸಾವಿರದಿಂದ 30 ಸಾವಿರ ರೂ.ಗಳಂತೆ ಗಾಂಜಾವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಟೆಕ್ಕಿಗಳಿಗೆ ಮಾರಾಟ, ಸರಬರಾಜು ಮಾಡುತ್ತಿದ್ದ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.

ಮಾದಕವಸ್ತು ಮಾರಾಟ ಮಾಡುತ್ತಿದ್ದ ಮಾಹಿತಿ ಪಡೆದು ದಾಳಿ ನಡೆಸಿ 9 ಜನರನ್ನು ಬಂಧಿಸಿ 22 ಲಕ್ಷ ಮೌಲ್ಯದ 57 ಕೆಜಿ ಗಾಂಜಾ, 10 ಮೊಬೈಲ್, 20 ಸಾವಿರ ಹಣ, ಕಾರು, ಡಿಯೋ ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.

Facebook Comments