ಉತ್ತರ ವಿಭಾಗ ಪೊಲೀಸರ ಕಾರ್ಯಾಚರಣೆ, ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.18- ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ 38 ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ 17.89 ಕೆಜಿ ಗಾಂಜಾ ಮತ್ತು 600 ಎಂಎಲ್ ಗಾಂಜಾ ಆಯಿಲ್‍ನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ವಿಭಾಗದ ಠಾಣೆ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಚರಣೆ ನಡೆಸಿದ ಪೊಲೀಸರು, ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ 3 ಪೊಲೀಸ್ ಠಾಣೆಗಳಲ್ಲಿ 4 ಪ್ರಕರಣಗಳನ್ನು ದಾಖಲು ಮಾಡಿ ಐವರನ್ನು ಬಂಧಿಸಿ 17.89 ಕೆಜಿ ಗಾಂಜಾ ಮತ್ತು 600 ಎಂಎಲ್ ಗಾಂಜಾ ಆಯಿಲ್ ವಶಪಡಿಸಿಕೊಂಡಿದ್ದಾರೆ.

# ಸೋಲದೇವನಹಳ್ಳಿ: ಅಚ್ಚುತನಗರದ 5ನೇ ಕ್ರಾಸ್ ರಸ್ತೆ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ವಿನಯ್‍ಕುಮಾರ್(22) ಎಂಬಾತನನ್ನುಬಂಧಿಸಿ 4 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.  ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ನಡುವೆ ಬರುವ ಅಕೂರ್ ವ್ಯಾಲಿಯಲ್ಲಿ ವ್ಯಕ್ತಿಯೊಬ್ಬರಿಂದ ತಂದಿರುವುದಾಗಿ ಹಾಗೂ ಅದನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದು ಎಂದು ಹೇಳಿದ್ದಾರೆ.

# ಆರ್ ಎಂಸಿಯಾರ್ಡ್: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಅರುಣ್ ಮತ್ತು ಮಹದೇವ್ ಎಂಬಾತನನ್ನು ಬಂಧಿಸಿ ಇವರಿಬ್ಬರ ಮಾಹಿತಿ ಮೇರೆಗೆ ತಮಿಳುನಾಡಿನ ವಿಜಯನ್ ಎಂಬಾತನನ್ನು ಬಂಧಿಸಿ 10.4 ಕೆಜಿ ಗಾಂಜಾ ವಶಪಡಿಸಿಕೊಂಡು ಮತ್ತೊಬ್ಬನಿಗಾಗಿ ಶೋಧ ಮುಂದುವರೆದಿದೆ.

ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದ್ದ ಕಿರಣ್ ಎಂಬಾತನನ್ನು ವಿಚಾರಣೆಗೊಳಪಡಿಸಿ,ಗಾಂಜಾ ಸರಬರಾಜು ಮಾಡುತ್ತಿದ್ದ ದೀಪನ್(24) ಎಂಬುವನನ್ನು ಬಂಧಿಸಿ 3.4 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ವೈಜಾಕ್‍ನಲ್ಲಿ ವ್ಯಕ್ತಿಯೊಬ್ಬ ಗಾಂಜಾ ಕೊಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದು, ಈತನಿಗಾಗಿ ಶೋಧ ಮುಂದುವರೆದಿದೆ.

# ಜಾಲಹಳ್ಳಿ: ಸೆಂಟ್ ಕ್ಲಾರೆಟ್ ಕಾಲೇಜು ಬಳಿ ಗಾಂಜಾ ಆಯಿಲ್‍ನ್ನು ತಂದು ಮಾರಾಟ ಮಾಡುತ್ತಿದ್ದ ತವನೀಶ್ ಎಂಬಾತನನ್ನು ಬಂಧಿಸಿ 600 ಎಂಎಲ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ವಿಭಾಗದ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗಾಂಜಾ ಮತ್ತು ಇನ್ನಿತರ ಮಾದಕ ಸೇವನೆ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ದ 12 ಪೊಲೀಸ್ ಠಾಣೆಗಳಲ್ಲಿ 30 ಪ್ರಕರಣಗಳನ್ನು ದಾಖಲು ಮಾಡಿಕೊಂಡು 33 ಮಂದಿಯನ್ನು ಬಂಧಿಸಲಾಗಿದೆ.

Facebook Comments