ಕುಖ್ಯಾತ ಪುಂಡನಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ಬಂಧಿಸಲು ಹೋದ ಪೊಲೀಸರ ಮೇಲೆಯೇ ಡ್ರ್ಯಾಗರ್‍ನಿಂದ ಹಲ್ಲೆ ಮಾಡಿದ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಕೃಷ್ಣ ಅಲಿಯಾಸ್ ಕಳ್ಳಕೃಷ್ಣ ಅಲಿಯಾಸ್ ಆಟೋ ಕೃಷ್ಣ (26) ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲವು ಪ್ರಕರಣಗಳಲ್ಲಿ ಬಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು-ಕೊಪ್ಪ ರಸ್ತೆಯ ರಾಜಹೈರೀಸ್ ಲೇಔಟ್‍ನಲ್ಲಿ ರಾತ್ರಿ 8 ಗಂಟೆಯಲ್ಲಿ ಇರುವ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ತಕ್ಷಣ ಇನ್ಸ್‍ಪೆಕ್ಟರ್ ಕಿಶೋರ್‍ಕುಮಾರ್ ಹಾಗೂ ಸಬ್‍ಇನ್ಸ್‍ಪೆಕ್ಟರ್ ಅಯ್ಯಪ್ಪ, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಬಂಧಿಸಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಆರೋಪಿ ಕೃಷ್ಣ ಡ್ರ್ಯಾಗರ್‍ನಿಂದ ಅಯ್ಯಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಇನ್ಸ್‍ಪೆಕ್ಟರ್ ಕಿಶೋರ್‍ಕುಮಾರ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ.

ಪೊಲೀಸರ ಮಾತಿಗೆ ಕಿವಿಗೊಡದೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್ ಹಾರಿಸಿದ ಗುಂಡು ಆರೋಪಿ ಬಲಗಾಲಿಗೆ ತಗುಲಿ ಗಾಯಗೊಂಡು ಕುಸಿದು ಬಿದ್ದಿದ್ದಾನೆ.
ತಕ್ಷಣ ಪೊಲೀಸರು ಆರೋಪಿಯನ್ನು ಸುತ್ತುವರಿದು ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡ ಸಬ್‍ಇನ್ಸ್‍ಪೆಕ್ಟರ್ ಅಯ್ಯಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ಕೃಷ್ಣನ ಮೇಲೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ, ಅಪಹರಣ, ಸುಲಿಗೆ ಸೇರಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಬೊಮ್ಮನಹಳ್ಳಿ, ಕೋಣನಕುಂಟೆ, ಸುಬ್ರಹ್ಮಣ್ಯಪುರ, ಹುಳಿಮಾವು ಮುಂತಾದ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಈತ ಅಪರಾಧ ಕೃತ್ಯವೆಸಗಿ ಪರಾರಿಯಾಗುತ್ತಿದ್ದ.

Facebook Comments