ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ : ಡ್ರಗ್ಸ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.27- ಮಾದಕವಸ್ತು ಗಾಂಜಾ ಮತ್ತು ಎಂಡಿಎಂಎ ಹಾಗೂ ಇತರೆ ಕೆಮಿಕಲ್ ಡ್ರಗ್‍ನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಇಬ್ಬರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಚಿಕ್‍ವಾಡ್ ವಿನ್ಸೆಂಟ್ ಒಗಿಬೊ(30) ಮತ್ತು ಎಮೇಕ ಚಿನೆಡು ಮೈಕಲ್(45)ಬಂಧಿತ ನೈಜೀರಿಯಾ ಪ್ರಜೆಗಳು.

ಕೊಡುಗೆಹಳ್ಳಿ-ಹೂಡಿ ರೈಲ್ವೆ ನಿಲ್ದಾಣ ಕಡೆಗೆ ಹೋಗುವ ರಸ್ತೆ ಎಡಭಾಗದ ಖಾಲಿ ಜಾಗದಲ್ಲಿ ನೈಜೀರಿಯಾ ಪ್ರಜೆಗಳಿಬ್ಬರು ಬೈಕ್ ನಿಲ್ಲಿಸಿಕೊಂಡು ಒಂದು ಬ್ಯಾಗ್‍ನಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ದಾರಿಯಲ್ಲಿ ಹೋಗುವ ಸಾರ್ವಜನಿಕರಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದ ವೈಟ್‍ಫೀಲ್ಡ್ ವಿಭಾಗದ ಉಪಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಕಮೀಷನರ್ ಮನೋಜ್‍ಕುಮಾರ್, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಡುಗೋಡಿ ಠಾಣೆಯ ಇನ್‍ಸ್ಪೆಕ್ಟರ್ ನರೇಂದ್ರಕುಮಾರ್, ಕೆಆರ್‍ಪುರ ಠಾಣೆ ಇನ್‍ಸ್ಪೆಕ್ಟರ್ ಅಂಬರೀಶ್ ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ನೈಜೀರಿಯಾ ಪ್ರಜೆಗಳನ್ನು ಬಂಧಿಸಿ ಗಾಂಜಾ, 4 ಮೊಬೈಲ್, ಕೆಮಿಕಲ್ ಡ್ರಗ್‍ಗಳು, ಮೋಟಾರ್ ಬೈಕ್, ಒಂದು ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.

ಆರೋಪಿ ಚಿಕ್‍ವಾಡ್ ವಿನ್ಸೆಂಟ್ ಈ ಹಿಂದೆ ಕೆಆರ್‍ಪುರ ಠಾಣೆಯ ಪ್ರಕರಣವೊಂದರಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ಈ ಕಾರ್ಯಾಚರಣೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Facebook Comments