ನಾಳೆ ಉಪಚುನಾವಣೆ ಮತದಾನ : ಆರ್.ಆರ್.ನಗರದಲ್ಲಿ ಪೊಲೀಸ್ ಸರ್ಪಗಾವಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.2-ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 2563 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ಇಬ್ಬರು ಡಿಸಿಪಿ, 08 ಎಸಿಪಿ, 30 ಇನ್‍ಸ್ಪೆಕ್ಟರ್‍ಗಳು, 94 ಪಿಎಸ್‍ಐ, 185 ಎಸ್‍ಐ, 1547 ಕಾನ್‍ಸ್ಟೆಬಲ್‍ಗಳು, 699 ಹೋಂಗಾರ್ಡ್‍ಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಕ್ಷೇತ್ರದಲ್ಲಿ 678 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 82 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಪ್ರತಿ ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬರು ಹೆಡ್‍ಕಾನ್‍ಸ್ಟೆಬಲ್ ಹಾಗೂ ಕಾನ್‍ಸ್ಟೆಬಲ್, ಸಾಮಾನ್ಯ ಮತಗಟ್ಟೆಗಳಿಗೆ ಒಬ್ಬರು ಕಾನ್‍ಸ್ಟೇಬಲ್, ಒಬ್ಬರು ಹೋಂಗಾರ್ಡ್‍ನ್ನು ಹಾಕಲಾಗಿದೆ.  40 ಫ್ಲೇಯಿಂಗ್ ಸ್ಕ್ವಾಡ್‍ಗಳು, 02 ಕಂಪನಿ ಸಿಐಎಸ್‍ಎಫ್, ಒಂದು ಕಂಪನಿ ಕೇರಳ ರಾಜ್ಯ ಸಶಸ್ತ್ರ ಮೀಸಲು ಪಡೆ, 19 ಕೆಎಸ್‍ಆರ್‍ಪಿ ಹಾಗೂ 20 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ 91 ಚಿತಾ ಹಾಗೂ 32 ಹೊಯ್ಸಳ ವಾಹನಗಳನ್ನು ಸಹ ನಿಯೋಜನೆ ಮಾಡಲಾಗಿದೆ.

ನಾಳೆ ನಡೆಯಲಿರುವ ಚುನಾವಣೆಗೆ 100 ಮೈಕ್ರೋ ಅಬ್ಸರ್‍ವರ್, 52 ವಿಡಿಯೋಗ್ರಾಫರ್‍ಗಳ ನೇಮಕದ ಜತೆಗೆ 40 ವೆಬ್‍ಕಾಸ್ಟಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವೀಕ್ಷಕರುಗಳು 678 ಮತಗಟೆಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ ಮಾತ್ರವಲ್ಲ ಪ್ರತಿ ಮತಗಟ್ಟೆಗಳ ಸುತ್ತಮುತ್ತಲ ಚಲನವಲನಗಳನ್ನು ವಿಡಿಯೋಗಳಲ್ಲಿ ಸೆರೆ ಹಿಡಿಯಲಿದ್ದಾರೆ.

ಚುನಾವಣಾ ಪ್ರಕ್ರಿಯೆಗಳು ವೆಬ್ ಕಾಸ್ಟಿಂಗ್‍ನಲ್ಲಿ ಬಿತ್ತರಗೊಳ್ಳಲಿದ್ದು, ಯಾವುದೇ ಆಮಿಷವೊಡ್ಡುವಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜಿಲ್ಲಾ ಚುನಾವಣಾಧಿಕಾರಿಗಳು ತೀರ್ಮಾನಿಸಿದ್ದಾರೆ. ಇಡೀ ಚುನಾವಣಾ ಪ್ರಕ್ರಿಯೆಯನ್ನು ನೋಡಿಕೊಳ್ಳಲು 3957 ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.  ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಇವಿಎಂ ಯಂತ್ರಗಳನ್ನಿಡುವ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಇಂದು ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.

ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮಸ್ಟರಿಂಗ್ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಕೇಂದ್ರದ ಸುತ್ತಮುತ್ತ ಪೊಲೀಸ್ ಚಕ್ರವ್ಯೂಹ ಏರ್ಪಡಿಸಲಾಗಿದೆ. ಮಸ್ಟರಿಂಗ್ ಕೇಂದ್ರದ ಸುತ್ತಮುತ್ತ ಸಿಸಿಟಿವಿ ಅಳವಡಿಸಲಾಗಿದೆ.

Facebook Comments