6 ಕೆಜಿ ಚಿನ್ನ ಸಾಗಾಣಿಕೆ ತನಿಖೆ ಚುರುಕು, ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಶ್ಲಾಘನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ನಿನ್ನೆ ನಗರದ ದೊಡ್ಡಪೇಟೆ ಸರ್ಕಲ್ ಬಳಿ ಸಿಕ್ಕಿದ ಮೂರು ಕೋಟಿ ಬೆಲೆಯ ಆರು ಕೆ.ಜಿ ಚಿನ್ನದ ಆಭರಣಗಳ ಸಾಗಣಿಕೆ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಈ ಚಿನ್ನದ ಆಭರಣಗಳು ಮುಂಬೈನಿಂದ ಬೆಂಗಳೂರು ನಗರಕ್ಕೆ ಬಂದಿವೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆಭರಣಗಳ ಮೂಲದ ಬಗ್ಗೆ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಎಂ.ಪಾಟೀಲ್ ಅವರು ಪತ್ರ ಬರೆದಿದ್ದಾರೆ. ಚಿನ್ನದ ಆಭರಣಗಳನ್ನು ಪತ್ತೆ ಹಚ್ಚಿದ ಸಿಟಿ ಮಾರ್ಕೆಟ್ ಠಾಣೆಯ ಇಬ್ಬರು ಕಾನ್‍ಸ್ಟೆಬಲ್ ಮತ್ತು ಮಹಿಳಾ ಸಬ್‍ಇನ್ಸ್‍ಪೆಕ್ಟರ್ ಅವರ ಕಾರ್ಯವನ್ನು ಹಿರಿಯ ಪೊಲೀಸ್ ಅಕಾರಿಗಳು ಶ್ಲಾಘಿಸಿದ್ದಾರೆ.

ಮೊನ್ನೆ ರಾತ್ರಿ 11.30ರ ಸಂದರ್ಭದಲ್ಲಿ ದೊಡ್ಡಪೇಟೆ ಸರ್ಕಲ್‍ನಲ್ಲಿ ಕಾನ್‍ಸ್ಟೆಬಲ್‍ಗಳಾದ ಆನಂದ್ ಮತ್ತು ಹನುಮಂತ ಅವರುಗಳು ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದರು. ಆಗ ಆ್ಯಕ್ಟೀವಾ ಹೊಂಡಾದಲ್ಲಿ ಇಬ್ಬರು ಬಂದಿದ್ದಾರೆ. ಅವರಲ್ಲಿ ಒಬ್ಬ ಬ್ಯಾಗ್ ನೇತು ಹಾಕಿಕೊಂಡಿದ್ದನು.

ಕಾನ್‍ಸ್ಟೆಬಲ್‍ಗಳು ಅದನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಚಿನ್ನದ ಆಭರಣಗಳು ಕಂಡು ಬಂದಿತ್ತು. ತಕ್ಷಣ ಠಾಣೆಗೆ ಸುದ್ದಿ ಮುಟ್ಟಿಸಿದ್ದರು.
ಕೂಡಲೇ ಸಬ್‍ಇನ್ಸ್‍ಪೆಕ್ಟರ್ ಸವಿತಾ ಅವರು ಸ್ಥಳಕ್ಕೆ ಧಾವಿಸಿ ಹೊಂಡಾ ಆ್ಯಕ್ಟೀವಾದಲ್ಲಿ ಬಂದಿದ್ದ ಇಬ್ಬರನ್ನು ಪ್ರಾಥಮಿಕ ತನಿಖೆ ನಡೆಸಿ ಠಾಣೆಗೆ ಕರೆತಂದರು.

ನಂತರ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಆಭರಣಗಳನ್ನು ಜಫ್ತಿ ಮಾಡಿದ್ದಾರೆ.
ಆಭರಣಗಳ ದಾಖಲೆ ಬಗ್ಗೆ ಆ ಇಬ್ಬರು ನಿಖರವಾದ ಮಾಹಿತಿ ನೀಡದ ಕಾರಣ ಹೆಚ್ಚಿನ ವಿಚಾರಣೆಯನ್ನು ಕೈಗೊಳ್ಳಲಾಗಿದೆ.

Facebook Comments