ಕಾರಿನಲ್ಲಿ ಮಾದಕ ವಸ್ತು ಮಾರಾಟ, ಟ್ರಾವೆಲ್ಸ್ ಏಜೆನ್ಸಿ ಮಾಲೀಕನ ಸೆರೆ
ಬೆಂಗಳೂರು, ಡಿ.1- ಟ್ರಾವೆಲ್ಸ್ ಏಜೆನ್ಸಿ ಸೋಗಿನಲ್ಲಿ ಕಾರಿನಲ್ಲಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಎಸ್ಜೆ ಪಾರ್ಕ್ ಠಾಣೆ ಪೋಲೀಸರು ಬಂಧಿಸಿ 30 ಲಕ್ಷ ರೂ. ಬೆಲೆಯ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರದೀಪ್ಕುಮಾರ್ (36) ಬಂಧಿತ ಆರೋಪಿ.
ಈತನಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್, ಒಂದು ಸಾವಿರ ಹಣ, 30 ಲಕ್ಷ ಬೆಲೆಯ 60 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಎಸ್ಜೆ ಪಾರ್ಕ್ ವ್ಯಾಪ್ತಿಯ ಎನ್ಎಂ ರಸ್ತೆ, ಎಂಎಸ್ ಎಂಟರ್ಪ್ರೈಸಸ್ ಬಳಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡದ ಮುಂಭಾಗದಲ್ಲಿ ಈತ ಗಾಂಜಾ ಮಾರಾಟ ಮಾಡಲು ಬಂದಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಪ್ರದೀಪ್ಕುಮಾರ್ ಬೆಂಗಳೂರು ಟ್ರಾನ್ಸ್ಪೋರ್ಟ್ ಸಲ್ಯೂಷನ್ ಎಂಬ ಹೆಸರಿನ ಟ್ರಾವೆಲ್ಸ್ ಏಜೆನ್ಸಿ ಇಟ್ಟುಕೊಂಡಿದ್ದು, ಸುಮಾರು 25 ಕಾರುಗಳ ಮಾಲೀಕನಾಗಿದ್ದಾನೆ. ಈತ ಐದು ವರ್ಷಗಳ ಹಿಂದೆ ಕೋಲಾರ ನಿವಾಸಿ ಸಲೀಂ ಎಂಬಾತನಿಂದ ಮಾದಕ ವಸ್ತು ಗಾಂಜಾವನ್ನು ಖರೀದಿ ಮಾಡಿ ಟ್ರಾವೆಲ್ಸ್ ಕಾರುಗಳಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ. ಈತನಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಸಲಿಂ ಎಂಬಾತನ ಪತ್ತೆಗೆ ಶೋಧ ಮುಂದುವರೆದಿದೆ.