ಮೊಬೈಲ್ ಮತ್ತು ವಾಹನ ಕಳ್ಳತನ ಮಾಡುತ್ತಿದ್ದ ಚೋರನ ಸೆರೆ : 30 ಲಕ್ಷ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.22- ಮೊಬೈಲ್ ದರೋಡೆ ಮತ್ತು ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಜೆಸಿ ನಗರ ಠಾಣೆ ಪೊಲೀಸರು ಬಂಧಿಸಿ 30 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, ಕಾರು ಮತ್ತು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ನೀಲಸಂದ್ರದ ಎಲ್‍ಆರ್ ನಗರ ನಿವಾಸಿ ಮುಬಾರಕ್ (30) ಬಂಧಿತ ಆರೋಪಿ.

ಈತ ನೀಡಿದ ಮಾಹಿತಿ ಮೇರೆಗೆ ಸುಮಾರು 30 ಲಕ್ಷ ಬೆಲೆಬಾಳುವ ವಿವಿಧ ಕಂಪೆನಿಯ 11 ದ್ವಿಚಕ್ರ ವಾಹನ, ಒಂದು ಕಾರು, 2 ಲ್ಯಾಪ್‍ಟಾಪ್ ಮತ್ತು ವಿವಿಧ ಕಂಪೆನಿಗಳ 31 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಜೆಸಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜೆಸಿ ನಗರದ ಪಿಜಿ ರಸ್ತೆ ನಿವಾಸಿ ಇಮ್ಯಾನ್ಯುಯಲ್ ಎಂಬುವವರು ಕಳೆದ ನವೆಂಬರ್ 5ರಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಜಯಮಹಲ್‍ನಲ್ಲಿರುವ ಎಸ್‍ಬಿಐ ಬ್ಯಾಂಕ್‍ನಲ್ಲಿ 35 ಸಾವಿರ ಹಣ ಡ್ರಾ ಮಾಡಿಕೊಂಡು ತಮ್ಮ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟುಕೊಂಡು ಹೋಗುತ್ತಿದ್ದರು.

ಜೆಸಿ ನಗರ ಮುಖ್ಯರಸ್ತೆಯಲ್ಲಿನ ಹಾರ್ಡ್‍ವೇರ್ ಶಾಪ್‍ನಲ್ಲಿ ಬೀಗ ಖರೀದಿ ಮಾಡುವ ಸಲುವಾಗಿ ತಮ್ಮ ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡಿ ಹೋಗಿದ್ದಾಗ ಕಳ್ಳರು ಮುಂಭಾಗದ ಡಿಕ್ಕಿಯಲ್ಲಿದ್ದ 35 ಸಾವಿರ ಹಣ, ಮೊಬೈಲ್ ಮತ್ತು ಇತರೆ ದಾಖಲಾತಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಜೆಸಿ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು. ಜ.17ರಂದು ರಾತ್ರಿ 8 ಗಂಟೆ ಸಮಯದಲ್ಲಿ ಪಿಎಸ್‍ಐ ವಿನೋದ ಜಿರಗಾಳೆ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಜೆಸಿ ನಗರ ಮುಖ್ಯರಸ್ತೆಯಿಂದ ಪಿಆರ್‍ಟಿಸಿ ಕಡೆಗೆ ಆ್ಯಕ್ಟೀವ್ ಹೋಂಡಾ ಸ್ಕೂಟರ್‍ನಲ್ಲಿ ಇಬ್ಬರು ಬರುತ್ತಿರುವುದನ್ನು ಪೊಲೀಸರು ಗಮನಿಸುತ್ತಿದ್ದಂತೆ ಗಾಬರಿಯಾಗಿ ಸ್ಕೂಟರ್ ತಿರುಗಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದರು.

ತಕ್ಷಣ ಪೊಲೀಸರು ಅವರನ್ನು ಬೆನ್ನತ್ತಿ ಹೋದಾಗ ಒಬ್ಬಾತ ಪರಾರಿಯಾಗಿದ್ದು, ಮತ್ತೊಬ್ಬ ಸಿಕ್ಕಿಬಿದ್ದಿದ್ದನು. ಈತನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ತಲೆಮರೆಸಿಕೊಂಡಿರುವ ಸಹಚರನ ಜತೆ ಸೇರಿ ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರಿಗೆ ಬೆದರಿಸಿ ಮೊಬೈಲ್‍ಗಳನ್ನು ಸುಲಿಗೆ ಮಾಡುತ್ತಿದ್ದುದಾಗಿ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯ ಪತ್ತೆಕಾರ್ಯ ಮುಂದುವರಿದಿದೆ. ಆರೋಪಿ ಬಂಧನದಿಂದ ಜೆಸಿ ನಗರ ಠಾಣೆಯ 2 ಪ್ರಕರಣ, ಅತ್ತಿಬೆಲೆ, ಜೆಜೆ ನಗರ, ವಿದ್ಯಾರಣ್ಯಪುರ, ಇಂದಿರಾನಗರದ ತಲಾ ಒಂದೊಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು, ಜೆಸಿ ನಗರ ಸಾಮಾನ್ಯ ಕಳವು, ಸಂಜಯನಗರ ಮತ್ತು ಜೆಸಿ ನಗರದ ಮೊಬೈಲ್ ಸುಲಿಗೆ ಪ್ರಕರಣಗಳು, ಇಂದಿರಾನಗರದ ಕಾರು ಕಳವು ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳು ಪತ್ತೆಯಾಗಿರುತ್ತವೆ.
ಉಳಿದ ಐದು ದ್ವಿಚಕ್ರ ವಾಹನಗಳು ಮತ್ತು 31 ಮೊಬೈಲ್‍ಗಳ ವಾರಸುದಾರರ ಪತ್ತೆಕಾರ್ಯ ಪ್ರಗತಿಯಲ್ಲಿದೆ.

Facebook Comments