ಸ್ನೇಹಿತೆ ಮನೆಯಲ್ಲೇ ಕಳ್ಳತನ : ಇಬ್ಬರ ಬಂಧನ, 70 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ-ಆಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20- ತಮ್ಮ ವ್ಯವಹಾರಗಳಲ್ಲಿ ನಷ್ಟ ಉಂಟಾಗಿದ್ದರಿಂದ ಹಣಕ್ಕಾಗಿ ಮನೆಗಳ್ಳತನ ಮಾಡಿದ್ದ ಮತ್ತು ಕಳ್ಳತನಕ್ಕೆ ಯೋಜನೆ ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಪೂರ್ವ ವಿಭಾಗದ ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿ ವಿದೇಶಿ ಕರೆನ್ಸಿ ಹಾಗೂ ದೇಶೀಯ ಕರೆನ್ಸಿ ಸೇರಿದಂತೆ 70 ಲಕ್ಷ ರೂ. ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ. ಆಡುಗೋಡಿಯ ಲಕ್ಕಸಂದ್ರ ನಿವಾಸಿ ನಜೀಂ ಶರೀಫ್ (41) ಮತ್ತು ಈತನ ಸ್ನೇಹಿತ ಸುದ್ದಗುಂಟೆಪಾಳ್ಯದ ನ್ಯೂ ಗುರಪ್ಪನಪಾಳ್ಯ ನಿವಾಸಿ ಮಹಮ್ಮದ್ ಶಫಿವುಲ್ಲಾ (42) ಬಂಧಿತ ಆರೋಪಿಗಳು.

ಆರೋಪಿ ನಜೀಂ ಶರೀಫ್‍ಗೆ ರಿಯಲ್ ಎಸ್ಟೇಟ್‍ನಲ್ಲಿ ನಷ್ಟವಾಗಿದ್ದರೆ, ಸ್ನೇಹಿತ ಮಹಮ್ಮದ್ ಶಫಿವುಲ್ಲಾಗೆ ಗ್ರಾನೈಟ್ ಸಪ್ಲೈ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ನಷ್ಟ ಭರಿಸಲು ಹಣದ ಆವಶ್ಯಕತೆಗಾಗಿ ಕಳ್ಳತನ ಮಾಡಲು ನಜೀಂ ಶರೀಫ್ ನಿರ್ಧರಿಸಿದ್ದಾನೆ. ಈ ವೇಳೆ ಕಾಕ್ಸ್‍ಟೌನ್‍ನಲ್ಲಿರುವ ಸ್ನೇಹಿತೆ ಮನೆ ನೆನಪಾಗಿದೆ. ಅವರ ಮನೆಯಲ್ಲಿ ಕಳ್ಳತನ ಮಾಡಿದರೆ ಹಣ-ಆಭರಣ ಸಿಗಬಹುದೆಂದು ನಿರ್ಧರಿಸುತ್ತಾನೆ.

ಅದರಂತೆ ಕಳ್ಳತನಕ್ಕೆ ಸ್ನೇಹಿತನನ್ನು ಬಳಸಿಕೊಳ್ಳಲು ಆತನ ಜತೆಯೂ ಮಾತನಾಡಿದಾಗ ಅದಕ್ಕೆ ಆತನೂ ಒಪ್ಪಿಕೊಂಡಿದ್ದಾನೆ. ಸ್ನೇಹಿತೆ ಅಣ್ಣ ಜನವರಿ 12ರಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆತನನ್ನು ನೋಡಿಕೊಂಡು ಸ್ನೇಹಿತೆಯೂ ಆಸ್ಪತ್ರೆಯಲ್ಲಿರುವುದನ್ನು ಖಚಿತಪಡಿಸಿಕೊಂಡಿದ್ದಾನೆ. ಆಗಾಗ ಸ್ನೇಹಿತೆ ಮನೆಗೆ ಹೋಗಿಬರುತ್ತಿದ್ದ ನಜೀಂ ಅವರ ಮನೆಯ ಕೀಯನ್ನು ಹೇಗೋ ಕಳ್ಳತನ ಮಾಡಿ ಡೂಪ್ಲಿಕೆಟ್ ಕೀ ಮಾಡಿಸಿಕೊಂಡಿದ್ದಾನೆ.

ಇದೇ ಸರಿಯಾದ ಸಮಯವೆಂದು ತಿಳಿದು ಸ್ನೇಹಿತನಿಗೆ ಕಳ್ಳತನ ಮಾಡಲು ಹೇಳಿ ಅನುಮಾನ ಬಾರದಂತೆ ನಜೀಂ ಶರೀಫ್ ಆಸ್ಪತ್ರೆಗೆ ತೆರಳಿ ಸ್ನೇಹಿತೆ ಜತೆ ಇದ್ದಾನೆ. ಇತ್ತ ಆರೋಪಿ ಮಹಮ್ಮದ್ ಶಫೀವುಲ್ಲಾ ಕಾಕ್ಸ್‍ಟೌನ್‍ಗೆ ತೆರಳಿ ಅವರ ಮನೆಯ ಬೀಗ ಒಡೆದು ಒಳನುಗ್ಗಿ ಸೇಫ್ ಲಾಕರ್, ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿ ಮನೆಯೊಳಗೆಲ್ಲ ಕಾರದ ಪುಡಿ ಸಿಂಪಡಿಸಿ ನಂತರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಿದ್ದಾನೆ.

ಜನವರಿ 13ರಂದು ರಾತ್ರಿ ಆಸ್ಪತ್ರೆಯಿಂದ ಮಹಿಳೆ ಮನೆಗೆ ಬಂದಾಗ ಬಾಗಿಲು ಒಡೆದಿರುವುದನ್ನು ಗಮನಿಸಿ ಒಳಗೆ ಹೋಗಿ ನೋಡಿದಾಗ ಸೇಫ್ ಲಾಕರ್ ಮತ್ತು ಚಿನ್ನದ ಒಡವೆಗಳು ಹಾಗೂ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದನ್ನು ಗಮನಿಸಿ ಪುಲಿಕೇಶಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳತನದ ನಂತರ ಆರೋಪಿಗಳಿಬ್ಬರೂ ಸೇರಿ ಸೇಫ್ ಲಾಕರ್ ಒಡೆದಿದ್ದು, ಅದರಲ್ಲಿ ಲಕ್ಷಾಂತರ ದೇಶಿ ಮತ್ತು ವಿದೇಶಿ ಕರೆನ್ಸಿಗಳು ಇರುವುದು ಕಂಡುಬಂದಿದೆ. ಆರೋಪಿ ನಜೀಂ ಶರೀಫ್ ಹಂತ ಹಂತವಾಗಿ ಮಹಮ್ಮದ್ ಶಫಿವುಲ್ಲಾನಿಗೆ 10.50 ಲಕ್ಷ ಹಣ ನೀಡಿದ್ದು, ಉಳಿದ ಹಣ ತನ್ನ ಬಳಿಯೇ ಇಟ್ಟುಕೊಂಡಿದ್ದನು.

ಮನೆಗಳ್ಳತನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಈ ತಂಡ ಆರೋಪಿ ಇವರ ಮನೆಯಲ್ಲಿ ಕಳ್ಳತನ ಮಾಡಿ ಹೋದಂತಹ ಮಾರ್ಗದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದೆ. ಸುಮಾರು 15 ರಿಂದ 20 ದಿನಗಳ ಕಾಲ ಆರೋಪಿ ಹೋಗಿರುವ ಮಾರ್ಗದಲ್ಲಿರುವ ಸುಮಾರು 270ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ದ್ವಿಚಕ್ರ ವಾಹನ ತೆಗೆದುಕೊಂಡು ಹಲಸೂರು ಲೇಕ್‍ವರೆಗೆ ಹೋಗಿ ಅಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿರುವುದು ಕಂಡುಬಂದಿದೆ.

ಅಲ್ಲಿಂದ ಆಟೋದಲ್ಲಿ ಎಂಜಿ ರಸ್ತೆವರೆಗೆ ಹೋಗಿದ್ದು, ಅಲ್ಲಿ ಆಟೋ ಬದಲಾವಣೆ ಮಾಡಿ ಹೊಸೂರು ರಸ್ತೆಗೆ ಹೋಗಿ ಅಲ್ಲಿಂದ ಮತ್ತೊಂದು ಆಟೋ ಬದಲಾವಣೆ ಮಾಡಿ ಬನ್ನೇರುಘಟ್ಟ ಮುಖ್ಯರಸ್ತೆಗೆ ಹೋಗಿದ್ದು, ಮತ್ತೆ ಅಲ್ಲಿಂದ ಇನ್ನೊಂದು ಆಟೋದಲ್ಲಿ ಲಕ್ಕಸಂದ್ರದ ಮೂರನೆ ಕ್ರಾಸ್‍ವರೆಗೆ ಹೋಗಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾಗಳಿಂದ ತನಿಖಾ ತಂಡಕ್ಕೆ ಲಭ್ಯವಾಗಿದೆ.

ಈ ಸ್ಥಳದಿಂದ ಆರೋಪಿ ಹೋಗಿರುವ ಸ್ಥಳದ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿಲ್ಲ. ನಂತರ ಈ ದೃಶ್ಯಾವಳಿಗಳನ್ನು ಆಧರಿಸಿ ಖಚಿತ ಮಾಹಿತಿ ಮೇರೆಗೆ ಪಿಎಸ್‍ಐ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿದ್ದ ಹಾಗೂ ಮಾಡಿಸಿದ್ದ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿ ನಜೀಂ ಶರೀಫ್‍ನಿಂದ 33 ಲಕ್ಷ ದೇಶೀಯ ಕರೆನ್ಸಿ, 12 ಲಕ್ಷ ಮೌಲ್ಯದ ವಿವಿಧ ದೇಶಗಳ ವಿದೇಶಿ ಕರೆನ್ಸಿ, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ 2 ಮೊಬೈಲ್ ಫೋನ್‍ಗಳು, 6 ಲಕ್ಷ ಮೌಲ್ಯದ 45 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಮಹಮ್ಮದ್ ಶಫಿವುಲ್ಲಾನಿಂದ 6.40 ಲಕ್ಷ ರೂ. ನಗದು, 22 ಲಕ್ಷ ಮೌಲ್ಯದ ಕಾರು, ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನ, ಲಾಕರ್ ಒಡೆಯಲು ಬಳಸಿದ್ದ ಸುತ್ತಿಗೆ, ಸ್ಕ್ರೂ ಡ್ರೈವರ್, ಲಾಕರ್‍ನ ತುಣುಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪುಲಿಕೇಶಿನಗರ ಠಾಣೆಯ ಇನ್ಸ್‍ಪೆಕ್ಟರ್ ಮತ್ತು ಅವರ ಸಿಬ್ಬಂದಿಯ ಕಾರ್ಯವನ್ನು ಹಿರಿಯ ಪೆÇಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Facebook Comments