ಇಬ್ಬರು ಚೋರರ ಬಂಧನ : ಚಿನ್ನಾಭರಣ, 2 ದ್ವಿಚಕ್ರವಾಹನಗಳ ಜಪ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.17- ಜೈಲಿನಲ್ಲಿ ಪರಿಚಯವಾದ ಯುವಕನ ಜತೆ ಸೇರಿಕೊಂಡು ದ್ವಿಚಕ್ರ ವಾಹನ ಕಳ್ಳತನ ಮತ್ತು ಹಗಲು-ರಾತ್ರಿ ವೇಳೆ ಕನ್ನಗಳವು ಮಾಡುತ್ತಿದ್ದ ಇಬ್ಬರನ್ನು ಉತ್ತರ ವಿಭಾಗದ ನಂದಿನಿ ಲೇ ಔಟ್ ಠಾಣೆ ಪೊಲೀಸರು ಬಂಧಿಸಿ 7.2 ಲಕ್ಷ ರೂ. ಬೆಲೆಯ ಚಿನ್ನಾಭರಣ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಣನಕುಂಟೆ ಕ್ರಾಸ್ ಹರಿನಗರದ ನಾಗೇಶ್ (21) ಮತ್ತು ಲಗ್ಗೆರೆಯ ಚಂದ್ರ (19) ಬಂಧಿತರು.

ಫೆ.16ರಂದು ಗೀತಾ ಎಂಬುವರು ಕುಟುಂಬ ಸಮೇತ ಮನೆ ದೇವರ ಪೂಜೆಗೆಂದು ಚಾಮರಾಜನಗರಕ್ಕೆ ಹೋಗಿದ್ದರು. ಅಂದು ಮಧ್ಯಾಹ್ನ ಗೀತಾ ಅವರ ಸಹೋದರ ಗಿರೀಶ್ ಅವರು ಇವರ ಮನೆ ಬಳಿ ಹೋದಾಗ ಮನೆಯ ಡೋರ್ ಲಾಕ್ ಮೀಟಿರುವುದು ಕಂಡು ಬಂದಿದೆ. ತಕ್ಷಣ ಗೀತಾ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ಅವರು ಬಂದು ನೋಡಿದಾಗ ಮನೆಯ ಬೀಗ ಒಡೆದು 112 ಗ್ರಾಂ ಚಿನ್ನಾಭರಣ ಕಳ್ಳತನವಾಗಿರುವುದು ಕಂಡು ನಂದಿನಿ ಲೇ ಔಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮಾ.9ರಂದು ನಂದಿನಿ ಲೇ ಔಟ್ ಠಾಣೆಯ ಪಿಎಸ್‍ಐ ನವೀದ್ ಮತ್ತು ಸಿಬ್ಬಂದಿ ಬೆಳಗ್ಗೆ 10.30ರ ಸುಮಾರಿನಲ್ಲಿ ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಜ್ಯುವೆಲರಿ ಅಂಗಡಿಯೊಂದರ ಬಳಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿ ದ್ದುದನ್ನು ಗಮನಿಸಿದ್ದಾರೆ. ತಕ್ಷಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವ ಚಿನ್ನದ ಸರವನ್ನು ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾರೆ.

ಪೊಲೀಸರು ಇಬ್ಬರನ್ನು ಬಂಧಿಸಿ ಇವರು ನೀಡಿದ ಮಾಹಿತಿ ಮೇರೆಗೆ 7.2 ಲಕ್ಷ ರೂ. ಬೆಲೆಯ 152 ಗ್ರಾಂ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ನಾಗೇಶ್ ಮಾರತ್ತಹಳ್ಳಿ, ಬಂಡೆಪಾಳ್ಯ, ಜಲಹಳ್ಳಿ, ವಿ.ವಿ.ಪುರಂ, ಪರಪ್ಪನಅಗ್ರಹಾರ ಪೊಲೀಸ್ ಠಾಣೆಗಳಲ್ಲಿ ಹಗಲು-ರಾತ್ರಿ ಕನ್ನಕಳವು ಪ್ರಕರಣದ ಹಳೆ ಆರೋಪಿಯಾಗಿದ್ದಾನೆ.

ಈತನು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಕನ್ನಗಳವು ಪ್ರಕರಣದಲ್ಲಿ ಕಳೆದ ಡಿಸೆಂಬರ್‍ನಲ್ಲಿ ಜೈಲಿಗೆ ಹೋಗಿ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಿದ್ದನು. ಮತ್ತೊಬ್ಬ ಆರೋಪಿ ಚಂದ್ರ ಅಲಿಯಾಸ್ ಕರಿವಾಡ 2020ನೆ ಸಾಲಿನ ಜೂನ್ ತಿಂಗಳಲ್ಲಿ ನಂದಿನಿ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ದರೋಡೆಗೆ ಸಂಚು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುತ್ತಾನೆ.

ಈ ಇಬ್ಬರು ಆರೋಪಿಗಳು ಜೈಲಿನಲ್ಲಿದ್ದಾಗ ಪರಿಚಯವಾಗಿ ಬಿಡುಗಡೆಯಾದ ನಂತರ ನಾಗೇಶ್ ಜೊತೆ ಸೇರಿಕೊಂಡು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಆರೋಪಿಗಳ ಬಂಧನದಿಂದ ನಂದಿನಿ ಲೇ ಔಟ್ಲೀಪೊಸ್ ಠಾಣೆಯ -1 ಹಗಲು ರಾತ್ರಿ ಕನ್ನಗಳವು ಪ್ರಕರಣ ನಂದಿನಿಲೇಔಟ್ ಪೊಲೀಸ್ ಠಾಣೆಯ-1 ಚಿನ್ನದ ಚೈನ್ ಕಳವು, ತಲಘಟ್ಟಪುರ ಪೊಲೀಸ್ ಠಾಣೆಯ-1 ರಾತ್ರಿ ಕನ್ನ್ನಗಳವು ಪ್ರಯತ್ನ ಪ್ರಕರಣ , ತಲಘಟ್ಟಪುರ ಪೊಲೀಸ್ ಠಾಣೆ-1 ವಾಹನ ಕಳವು, ತುಮಕೂರು ನ್ಯೂ ಎಕ್ಸ್‍ಟೆನ್ಷನ್ ಪೊಲೀಸ್ ಠಾಣೆಯ-1 ದ್ವಿಚಕ್ರವಾಹನ ಕಳವು ಪ್ರಕರಣ ಸೇರಿ ಒಟ್ಟು 5 ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಪ್ರಕರಣದಲ್ಲಿ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೆ.ಎಸ್.ವೆಂಕಟೇಶ್ ನಾಯು ್ಡ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ವೆಂಕಟೇಗೌಡ ನೇತೃತ್ವದಲ್ಲಿ ಪಿಎಸ್‍ಐಗಳಾದ ನವೀದ್, ಗುರುಸ್ವಾಮಿ, ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Facebook Comments