ಎಣ್ಣೆ ಎಫೆಕ್ಟ್ : ಇಬ್ಬರ ನಡುವೆ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.1- ಕುಡಿದ ಅಮಲಿನಲ್ಲಿ ಇಬ್ಬರು ಗಾರೆ ಕೆಲಸಗಾರರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಮೂಲತಃ ತಮಿಳುನಾಡಿನ ವೇಲೂರು ನಿವಾಸಿ ಜ್ಞಾನಸಾಗರ(35) ಕೊಲೆಯಾದ ಗಾರೆ ಕೆಲಸಗಾರ.

ರಾಜರಾಜೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯ 15ನೇ ಕ್ರಾಸ್ ಐಡಿಯಲ್ ಹೋಮ್ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಜ್ಞಾನಸಾಗರ ಗಾರೆ ಕೆಲಸ ಮಾಡಿಕೊಂಡು ಇಲ್ಲೇ ವಾಸವಾಗಿದ್ದನು. ರಾತ್ರಿ ಊರಿಗೆ ತೆರಳುವ ಸಲುವಾಗಿ ಜ್ಞಾನಸಾಗರ ನಡೆದುಹೋಗುತ್ತಿದ್ದಾಗ ಈತನ ಜೊತೆ ಕೆಲಸ ಮಾಡುವ ರಂಜೀತ್ ಎದುರಾಗಿದ್ದಾನೆ. ಈತನು ಸಹ ವೇಲೂರು ಮೂಲದವನಾಗಿದ್ದು, ಹಲವು ವರ್ಷಗಳಿಂದ ನಗರದ ಬಂಗಾರಪ್ಪಗುಡ್ಡದಲ್ಲಿ ವಾಸವಾಗಿದ್ದು ಇಲ್ಲಿಯೇ ಗಾರೆ ಕೆಲಸ ಮಾಡಿಕೊಂಡಿದ್ದನು.

ಇವರಿಬ್ಬರು ರಾತ್ರಿ 11 ಗಂಟೆ ಸುಮಾರಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದಾಗ ಜ್ಞಾನಸಾಗರ ಬೈದಿದ್ದಾನೆ. ಇದರಿಂದ ಕೋಪಗೊಂಡ ರಂಜೀತ್ ಆತನ ಮುಖಕ್ಕೆ ಗುದ್ದಿದಾಗ ಕೆಳಗೆಬಿದ್ದ ಜ್ಞಾನಸಾಗರನನ್ನು ಬಿಡದೆ ಈತನ ತಲೆಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿ ಪರಾರಿಯಾಗಿದ್ದ.

ಈ ಮಾರ್ಗದಲ್ಲಿ ಹೋಗುತ್ತಿದ್ದವರು ವ್ಯಕ್ತಿ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಈತ ಗಾರೆ ಕೆಲಸಗಾರ ಜ್ಞಾನಸಾಗರ ಎಂಬುದು ತಿಳಿದುಬಂದಿದೆ.

ಈ ಮಾಹಿತಿ ಆಧರಿಸಿ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ರಂಜೀತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments