ಕ್ಷುಲ್ಲಕ ಕಾರಣಕ್ಕೆ ಅಪ್ಪನನ್ನೇ ಕೊಂದ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.13- ಕ್ಷುಲ್ಲಕ ವಿಚಾರಕ್ಕೆ ಅಪ್ಪ-ಮಗನ ನಡುವೆ ಜಗಳ ನಡೆದು ಅಪ್ಪನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿನೋಬ ನಗರದ ಜೈಭಾರತ್ ಮಾತಾ ಲೇಔಟ್ ನಿವಾಸಿ ಮಣಿ (55) ಕೊಲೆಯಾದ ನತದೃಷ್ಟ ತಂದೆ.

ಕೂಲಿ ಕೆಲಸ ಮಾಡಿಕೊಂಡು ಮಣಿ ಅವರು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಮಗ ದಿಲೀಪ (24) ಎಲ್ಲೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮನೆಯಲ್ಲಿ ಪ್ರತಿನಿತ್ಯ ಕ್ಷುಲ್ಲಕ ವಿಚಾರವಾಗಿ ಅಪ್ಪ-ಮಗನ ನಡುವೆ ಜಗಳ ನಡೆಯುತ್ತಿತ್ತು.

ನಿನ್ನೆ ಸಂಜೆ ಸಹ ಇವರಿಬ್ಬರ ನಡುವೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ನೆರೆಮನೆಯವರು ಇವರಿಬ್ಬರನ್ನು ಸಮಾಧಾನಪಡಿಸಿ ದಿಲೀಪನಿಗೆ ಒಂದೆರಡು ಏಟು ಹೊಡೆದು ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಇಷ್ಟಕ್ಕೇ ಸುಮ್ಮನಾಗದ ದಿಲೀಪ ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಮನೆಗೆ ಬಂದು ಅಪ್ಪನ ಜತೆ ಜಗಳವಾಡಿ ಹರಿತವಾದ ಆಯುಧದಿಂದ ಕುತ್ತಿಗೆ ಹಾಗೂ ಬೆನ್ನಿನ ಮೇಲೆ ಹಲ್ಲೆ ನಡೆಸಿದ್ದರಿಂದ ಮಣಿ ಅವರು ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ಕೆಜಿ ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಆರೋಪಿ ದಿಲೀಪನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನು ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇಡಲಾಗಿದೆ.

Facebook Comments