ಅಂಗವೈಕಲ್ಯ ಮಗನ ಹತ್ಯೆಗೆ ಸುಪಾರಿ ನೀಡಿದ್ದ ತಂದೆ ಮತ್ತು ಹಂತಕ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.18- ಅಂಗವೈಕಲ್ಯದಿಂದ ಬಳಲುತ್ತಿದ್ದ ಐದು ವರ್ಷದ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಹಾಗೂ ಇದಕ್ಕೆ ಸಹಕರಿಸಿದ ಮಗುವಿನ ತಂದೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಮಾಗಡಿ ರಸ್ತೆಯ ಪೊಲೀಸ್ ಠಾಣೆಯ ಹಳೆ ಆರೋಪಿ ಮಹೇಶ್(37) ಹಾಗೂ ಮಗುವಿನ ತಂದೆ ಜಯಪ್ಪ( 36) ಬಂಧಿತ ಆರೋಪಿಗಳು.

ನಗರದ ರೌಡಿಗಳು ಹಾಗೂ ಹಳೆ ಆರೋಪಿಗಳ ಚಲನ ವಲನಗಳ ಮೇಲೆ ನಿಗಾವಹಿಸುವಂತೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ನೀಡಿದ ಸೂಚನೆ ಮೇರೆಗೆ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತಯ್ಯಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಮಾಗಡಿರೋಡ್ ಪೊಲೀಸ್ ಠಾಣೆ ಹಳೇ ಆರೋಪಿ, ರಾಜಾಜಿನಗರದ ಭಾಷಂ ಸರ್ಕಲ್ 5ನೇ ಬ್ಲಾಕ್ ನಿವಾಸಿ ಮಹೇಶ್(37) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಈತ 5 ವರ್ಷದ ಮಗುವನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ನಂತರ ಆರೋಪಿ ಮಹೇಶ್‍ನನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಈತ ಮಾಗಡಿರೋಡ್ ಪೊಲೀಸ್ ಠಾಣೆ ರೌಡಿ ಆಸಾಮಿಯಾಗಿದ್ದು, ಈತನು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಒಂದು ತಿಂಗಳ ಹಿಂದೆ ಗಾರೆ ಕೆಲಸ ಮಾಡುವ ದಾವಣಗೆರೆ ಮೂಲದ ಜಯಪ್ಪನ ಪರಿಚಯವಾಗಿದೆ.

ಈತನು ಮಹೇಶ್‍ನೊಂದಿಗೆ ತನಗೆ 4 ಜನ ಮಕ್ಕಳು,5 ವರ್ಷದ ಮಗ ಬಸವರಾಜು ಅಂಗವಿಕಲವಾಗಿದ್ದು, ಮಾತನಾಡಲು ಮತ್ತು ನಡೆದಾಡಲು ಬರುವುದಿಲ್ಲ. ಆ ಮಗುವಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಚಿಕತ್ಸೆ ಕೊಡಿಸಿದ್ದರೂ ಸಹ ಮಗು ಗುಣಮುಖವಾಗಿಲ್ಲ. ಇನ್ನುಮುಂದೆ ಈ ಮಗುವಿಗೆ ಚಿಕಿತ್ಸೆ ಕೊಡಿಸಲು ನನ್ನ ಬಳಿ ಹಣ ಇರುವುದಿಲ್ಲ ಏನಾದರೂ ಮಾಡಬೇಕು ಎಂದು ಆರೋಪಿ ಮಹೇಶ್‍ಗೆ ತಿಳಿಸಿದ್ದರು.

ಆರೋಪಿ ಮಹೇಶ್ ಆ ಮಗುವನ್ನು ಇಂಜೆಕ್ಷನ್ ಕೊಟ್ಟು ಸಾಯಿಸಿಬಿಡುತ್ತೇನೆಂದು ತಿಳಿಸಿ, ಈ ಕೆಲಸಕ್ಕೆ 50 ಸಾವಿರ ರೂ. ನೀಡುವಂತೆ ಕೇಳಿದ್ದಾನೆ. ಮಗುವಿನ ತಂದೆ ಜಯಪ್ಪ ಆರೋಪಿ ಮಹೇಶ್‍ಗೆ ಕೆಲಸ ಮುಗಿಸಿದ ಮೇಲೆ ಹಣವನ್ನು ನೀಡುವುದಾಗಿ ತಿಳಿಸಿದ್ದು, ಆರೋಪಿ ಮಹೇಶ್ ಒಂದು ತಿಂಗಳ ಹಿಂದೆ ಮಗುವನ್ನು ಜಯಪ್ಪನ ಮನೆಯಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದ್ದನು.

ನಂತರ ಮಗುವಿನ ತಂದೆ ಗೊರಗುಂಟೆ ಪಾಳ್ಯದಲ್ಲಿರುವ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಿರುವುದು ವಿಚಾರಣೆ ತಿಳಿದುಬಂದಿದೆ.
ಸಿ.ಸಿ.ಬಿ ಸಂಘಟಿತ ಅಪರಾಧ ದಳದವರು ಆರೋಪಿಗಳಾದ ಮಹೇಶ್ ಮತ್ತು ಜಯಪ್ಪರವರನ್ನು ಪತ್ತೆಮಾಡಿ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ನಂದಿನಿಲೇಔಟ್ ಪೊಲೀಸರ ವಶಕ್ಕೆ ನೀಡಿದ್ದಾರೆ.

Facebook Comments