ಮೊಬೈಲ್‍ಗಾಗಿ ಯುವಕನನ್ನು ಕೊಂದಿದ್ದ ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20- ಕೇವಲ ಮೊಬೈಲ್‍ಗಾಗಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದ್ದಾಂಹುಸೇನ್ (20) ಮತ್ತು ಮೊಹಮ್ಮದ್ ಸಿದ್ದಿಕ್(19) ಬಂಧಿತ ಆರೋಪಿಗಳು.

ಕಳೆದ ಜು.8ರಂದು ರಾತ್ರಿ 9.15ರ ಸುಮಾರಿನಲ್ಲಿ ನಾಗವಾರ ಪ್ಲೈಓವರ್ ಕೆಳಗೆ ಜ್ಞಾನೇಂದ್ರ ರೆಡ್ಡಿ (28) ಎಂಬಾತ ಮೊಬೈಲ್‍ನಲ್ಲಿ ತನ್ನ ಸ್ನೇಹಿತೆ ಜತೆ ಮಾತನಾಡುತ್ತಾ ನಿಂತಿದ್ದು, ಪಿಜಿಯಲ್ಲಿದ್ದ ಸ್ನೇಹಿತೆಗೆ ತಾನಿರುವ ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾನೆ.

ಸ್ನೇಹಿತೆ ಪಿಜಿ ಕಿಟಕಿಯಿಂದ ಈತನನ್ನು ನೋಡುತ್ತಿದ್ದಂತೆ ಹಿಂದಿನಿಂದ ಬಂದ ಇಬ್ಬರು ದರೋಡೆಕೋರರು ಮೊಬೈಲ್ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಚಾಕುವಿನಿಂದ ಎದೆಗೆ ಇರಿದು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.

ಇದನ್ನು ಗಮನಿಸಿದ ಈತನ ಸ್ನೇಹಿತೆ ತನ್ನ ಗೆಳತಿಯನ್ನು ಕರೆದುಕೊಂಡು ಸ್ಥಳಕ್ಕಾಗಮಿಸಿ ರಕ್ತದ ಮಡುವಿನಲ್ಲಿದ್ದ ಜ್ಞಾನೇಂದ್ರನನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ವೈದ್ಯರು ಪರೀಕ್ಷಿಸಿ ಈತ ಮಾರ್ಗಮಧ್ಯೆ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ.

ಏಕಾಏಕಿ ಜ್ಞಾನೇಂದ್ರರೆಡ್ಡಿಗೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಬಗ್ಗೆ ಸ್ನೇಹಿತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments