ಪೊಲೀಸರ ಮೇಲೆಯೇ ಡ್ರಾಗರ್‌ನಿಂದ ಹಲ್ಲೆ ಮಾಡಿದ ರೌಡಿ ಭರತನಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಆ.13- ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ರೌಡಿ ಡ್ರಾಗರ್‍ನಿಂದ ಹಲ್ಲೆ ಮಾಡಿದಾಗ ಸಬ್‍ಇನ್‍ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ತಗುಲಿ ಗಾಯಗೊಂಡಿರುವ ಘಟನೆ ರಾತ್ರಿ ನಡೆದಿದೆ.  ಭರತ ಅಲಿಯಾಸ್ ಬಾಬಿ(25) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ರೌಡಿ.ಎಂ.ಎಸ್‍ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ.

ಆ.10ರಂದು ಮಧ್ಯಾಹ್ನ 2.45ರ ಸುಮಾರಿನಲ್ಲಿ ನಂದಿನಿಲೇಔಟ್ ವ್ಯಾಪ್ತಿಯ ಗಣೇಶ ಬ್ಲಾಕ್, 6ನೇ ಕ್ರಾಸ್, ಹೋಳಿಮನೆ ಹತ್ತಿರ ರೌಡಿ ಶೀಟರ್ ವೆಂಕಟೇಶ್ ಅಲಿಯಾಸ್ ಕಾಡು ಮತ್ತು ಆತನ ತಂದೆ ನಡೆದುಕೊಂಡು ಹೋಗುವಾಗ ರೌಡಿ ಭರತ ಮತ್ತು ಆತನ ನಾಲ್ವರು ಸಹಚರರು ಏಕಾಏಕಿ ಆತನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದು, ಈ ಸಂಬಂಧ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ನಂದಿನಿ ಲೇಔಟ್ ಠಾಣೆ ಇನ್‍ಸ್ಪೆಕ್ಟರ್ ಲೋಹಿತ್ ತನಿಖೆ ಕೈಗೊಂಡು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.ನಿನ್ನೆ ರಾತ್ರಿ 12.40ರಲ್ಲಿ ಮಂಜುನಾಥ ಎಂಬುವರು ಕೆಲಸ ಮುಗಿಸಿಕೊಂಡು ಬೈಕಿನಲ್ಲಿ ನಂದಿನಿಲೇಔಟ್, ಲಗ್ಗೆರೆ ಬಿಡ್ಜ್ ಹತ್ತಿರ ಹೋಗುತ್ತಿದ್ದಾಗ ದರೋಡೆಕೋರರು ಮಂಜನಾಥ್‍ನವರನ್ನು ಅಡ್ಡಗಟ್ಟಿ ಹಣ, ಮೊಬೈಲ್ ಮತ್ತು ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ದರೋಡೆ ಬಗ್ಗೆ ಮಾಹಿತಿ ಪಡೆದ ಇನ್‍ಸ್ಪೆಕ್ಟರ್ ಲೋಹಿತ್ ಮತ್ತು ಪಿಎಸ್‍ಐ ಲಕ್ಷ್ಮಣ್ ಮತ್ತವರ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಆರೋಪಿಯು ದರೋಡೆ ಮಾಡಿದ ಬೈಕ್‍ನಲ್ಲೇ ಹೋಗುತ್ತಿದ್ದ ಮಾರ್ಗದ ಬಗ್ಗೆ ಖಚಿತ ಮಾಹಿತಿ ಪಡೆದು ಬೆನ್ನಟ್ಟಿದ ಪಿಎಸ್‍ಐ ಲಕ್ಷ್ಮಣ್ ಮತ್ತು ಸಿಬ್ಬಂದಿ, ಜಲಹಳ್ಳಿಯ ಪ್ರೆಸ್ಟೀಜ್ ಅಪಾರ್ಮೆಂಟ್ ಹತ್ತಿರ ಆರೋಪಿಯನ್ನು ಹಿಡಿಯಲು ಮುಂದಾದರು.

ಆರೋಪಿ ಭರತ ಅಲಿಯಾಸ್ ಬಾಬಿ ಕಾನ್‍ಸ್ಟೇಬಲ್ ಉಮೇಶ್ ಮೇಲೆ ಏಕಾಏಕಿ ಡ್ರ್ಯಾಗರ್‍ನಿಂದ ಹಲ್ಲೆ ಮಾಡಿದಾಗ ತಕ್ಷಣ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಣ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಯನ್ನು ಶರಣಾಗುವಂತೆ ಸೂಚಿಸಿದ್ದರೂ ಆರೋಪಿಯು ಪೊಲೀಸರ ಮೇಲೆ ಹಲ್ಲೆಗೆ ಮುಂದಾದನು.ತಕ್ಷಣ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ರವರು ತಮ್ಮ ಮತ್ತು ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಭರತನ ಬಲಗಾಲಿಗೆ ತಾಗಿ ಕುಸಿದು ಬಿದ್ದಿದ್ದಾನೆ.

ಆರೋಪಿ ಭರತನನ್ನು ಸುತ್ತುವರೆದ ವಶಕ್ಕೆ ಪಡೆದ ಪೊಲೀಸರು ಚಿಕಿತ್ಸೆಗಾಗಿ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಹಲ್ಲೆಗೊಳಗಾದ ಪೊಲೀಸ್ ಕಾನ್‍ಸ್ಟೆಬಲ್ ಅವರನ್ನೂ ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭರತ ಇತ್ತೀಚೆಗೆ ಜೈಲಿನಿಂದ ಹೊರಗೆ ಬಂದಿದ್ದನು. ಈತನ ವಿರುದ್ಧ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯ 2 ಕೊಲೆ ಪ್ರಯತ್ನ, ನಂದಿನಿಲೇಔಟ್ ಪೊಲೀಸ್ ಠಾಣೆಯ 2 ಕೊಲೆ ಪ್ರಯತ್ನ, ದರೋಡೆ, ಬ್ಯಾಟರಾಯನಪುರ ಮತ್ತು ನೆಲಮಂಗಲ ಪೊಲೀಸ್ ಠಾಣೆಯ ಸುಲಿಗೆ ಪ್ರಕರಣ ದಾಖಲಾಗಿವೆ. ಆರೋಪಿಯ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.

 

Facebook Comments