ಆಗ್ನೇಯ ವಿಭಾಗದ ಪೊಲೀಸರ ಕಾರ್ಯಾಚರಣೆ : 1.48 ಕೋಟಿ ಮೌಲ್ಯದ ಮಾಲು ವಶ, 71 ಮಂದಿ ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.19- ನಗರದ ಆಗ್ನೇಯ ವಿಭಾಗದ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 71 ಆರೋಪಿಗಳನ್ನು ಬಂಧಿಸಿ ಸುಮಾರು 1 ಕೋಟಿ 48 ಲಕ್ಷಕ್ಕೂ ಹೆಚ್ಚು ಮೊತ್ತದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 1 ಕೆಜಿ 218 ಗ್ರಾಂ ವಜ್ರದ ನೆಕ್ಲೇಸ್ ಮತ್ತು ಚಿನ್ನಾಭರಣ, 3 ಕೆಜಿ ಬೆಳ್ಳಿ ವಸ್ತುಗಳು, 77 ಮೊಬೈಲ್, 18 ಲ್ಯಾಪ್‍ಟಾಪ್, 62 ಕೆಜಿ ಗಾಂಜಾ, 18 ಎಲ್‍ಎಸ್‍ಡಿ ಸ್ಟಿಪ್ಸ್‍ಗಳು, 22 ಕೆಜಿ ಕಾಪರ್ ಕೇಬಲ್, 76 ದ್ವಿಚಕ್ರ
ವಾಹನ, 2 ತ್ರಿಚಕ್ರ ವಾಹನ ಮತ್ತು ನಾಲ್ಕು ಚಕ್ರದ 4 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋರಮಂಗಲ ಪೊಲೀಸರು 32 ಪ್ರಕರಣಗಳನ್ನು ಪತ್ತೆಹಚ್ಚಿದರೆ ಮಡಿವಾಳ 24, ಆಡುಗೋಡಿ 18, ಸುದ್ದಗುಂಟೆಪಾಳ್ಯ 10, ಮೈಕೋ ಲೇಔಟ್ 7, ಬೊಮ್ಮನಹಳ್ಳಿ 2, ಬೇಗೂರು 6, ಎಲೆಕ್ಟ್ರಾನಿಕ್ ಸಿಟಿ 7, ಪರಪ್ಪನ ಅಗ್ರಹಾರ 4, ತಿಲಕ್‍ನಗರ 8, ಎಚ್‍ಎಸ್‍ಆರ್ ಲೇಔಟ್ 6 ಹಾಗೂ ಬಂಡೆಪಾಳ್ಯ ಪೆÇಲೀಸರು 4 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

ಕೋರಮಂಗಲ: ಕೋರಮಂಗಲ ಪೊಲೀಸರು 6 ಕನ್ನಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ 8 ಲಕ್ಷ ಮೌಲ್ಯದ 270 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಂಡು ಸಯ್ಯದ್ ಇಬ್ರಾಹಿಂ ಮತ್ತು ವಾಸಿಂ ಅಕ್ರಂನನ್ನು ಬಂಧಿಸಿದ್ದಾರೆ. ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ವಿಶ್ವಾಸ್ ಎಂಬಾತನನ್ನು ಬಂಧಿಸಿ 9 ದರೋಡೆ ಪ್ರಕರಣಗಳು, ಕನ್ನಗಳವು, ಮನೆಗಳವು, ಸಾಮಾನ್ಯ ಕಳವು ಪ್ರಕರಣಗಳನ್ನು ಪತ್ತೆಹಚ್ಚಿ 15 ಲಕ್ಷ ಮೌಲ್ಯದ 501 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ವ್ಯಾಪ್ತಿಯ ಇನ್ನೊಂದು ಪ್ರಕರಣದಲ್ಲಿ ದಯಾನಂದ್ ಮತ್ತು ಮಧುಸೂದನ್ ಎಂಬುವವರನ್ನು ಬಂಧಿಸಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಸಾವಿರ ಮೌಲ್ಯದ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸಲ್ಮಾನ್, ಸುಲ್ತಾನ್, ಇಮ್ತಿಯಾಜ್‍ನನ್ನು ಬಂಧಿಸಿ 4.71 ಲಕ್ಷ ರೂ. ಬೆಲೆಬಾಳುವ 17 ಮೊಬೈಲ್, 18 ಗ್ರಾಂ ಸರ, ಒಂದು ಲ್ಯಾಪ್‍ಟಾಪ್ ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರೆ, ಮಹಮ್ಮದ್ ವಾರೀಶ್‍ನನ್ನು ಬಂಧಿಸಿ 2.20 ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ 5 ಮಂದಿಯನ್ನು ಬಂಧಿಸಿ 35 ಕೆಜಿ ತೂಕದ ಗಾಂಜಾ ಹಾಗೂ ಇದನ್ನು ಸಾಗಣೆ ಮಾಡಲು ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.

ಮಡಿವಾಳ: ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸುಜಿತ್, ಪ್ರವೀಣ್‍ಕುಮಾರ್, ಪ್ರವೀಣ್ ಎಂಬುವವರನ್ನು ಬಂಧಿಸಿ 6.20 ಲಕ್ಷ ಮೌಲ್ಯದ 9 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ರವಿ ಎಂಬಾತನನ್ನು ಬಂಧಿಸಿ 8 ಲಕ್ಷ ಮೌಲ್ಯದ 4 ಚಕ್ರದ ವಾಹನವನ್ನು ವಶಪಡಿಸಿಕೊಂಡರೆ, ಮತ್ತೊಂದು ಪ್ರಕರಣದಲ್ಲಿ ಫಯಾಜ್‍ಖಾನ್, ಸತೀಶ್‍ನನ್ನು ಬಂಧಿಸಿ 14 ಲಕ್ಷ ಮೌಲ್ಯದ 13 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ, ರಿಜಿ, ನಿಬಿನ್ ಎಂಬುವವರನ್ನು ಬಂಧಿಸಿ 200 ಗ್ರಾಂ ಗಾಂಜಾ, 2 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಆಡುಗೋಡಿ: ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೂಪ್ ಮತ್ತು ರೋಷನ್ ಎಂಬುವವರನ್ನು ಬಂಧಿಸಿ 17 ಸಾವಿರ ಬೆಲೆಯ ಮೊಬೈಲ್ ವಶಪಡಿಸಿಕೊಂಡರೆ ಅಪ್ಪು  ಎಂಬಾತನನ್ನು ಬಂಧಿಸಿ 1.20 ಲಕ್ಷ ಮೌಲ್ಯದ 3 ಕೆಜಿ ಬೆಳ್ಳಿ ಆಭರಣ, 20 ಗ್ರಾಂ ಚಿನ್ನಾಭರಣ, ಲ್ಯಾಪ್‍ಟಾಪ್, ಕ್ಯಾಮೆರಾ ಮತ್ತು 6 ಕೊಳಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ವ್ಯಾಪ್ತಿಯ ಪ್ರಕರಣವೊಂದರಲ್ಲಿ ವೇಲು ಎಂಬಾತನನ್ನು ಬಂಧಿಸಿ ಗ್ಯಾಲಕ್ಸಿ ಮೊಬೈಲ್ ಹಾಗೂ ಸಯ್ಯದ್ ಇರ್ಫಾನ್ ಬಾಬಾಜಾನ್ ಎಂಬುವವರನ್ನು ಬಂಧಿಸಿ 1.50 ಲಕ್ಷ ಮೌಲ್ಯದ 3 ಬೈಕ್‍ಗಳನ್ನು ಹಾಗೂ ಅಲಿಂ ಪಾಷ, ಚಂದ್ರಕಾಂತ್, ಕುಮಾರ್‍ನನ್ನು ಬಂಧಿಸಿ 3 ಲಕ್ಷ ಮೌಲ್ಯದ 6 ಬೈಕ್‍ಗಳು ಹಾಗೂ ಸಯ್ಯದ್
ಯಾಸಿನ್‍ನನ್ನು ಬಂಧಿಸಿ ಮನೆಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 19 ಸಾವಿರ ಬೆಲೆಯ ಮೊಬೈಲ್ ಹಾಗೂ ಆರೋಪಿಗಳಾದ ಸಾಯಿ ಚೈತನ್ಯ, ರೋಹಿತ್, ಅಶೋಕ್‍ಕುಮಾರ್ ಮತ್ತು ಕಿರಣ್‍ನನ್ನು ಬಂಧಿಸಿ 15 ಸಾವಿರ ಬೆಲೆಬಾಳುವ ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಸುದ್ದಗುಂಟೆಪಾಳ್ಯ: ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ 6.60 ಲಕ್ಷ ಮೌಲ್ಯದ ಗಾಂಜಾ ಹಾಗೂ ಮೊಹಮ್ಮದ್ ಎಂಬಾತನನ್ನು ಬಂಧಿಸಿ ಬಿಎಂಡಬ್ಲ್ಯೂ ಬೈಕ್ ಹಾಗೂ ಸಂತೋಷ್ ಮತ್ತು ನವೀನ್‍ನನ್ನು ಬಂಧಿಸಿ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರೆ, ಮತ್ತೊಂದು ಪ್ರಕರಣದಲ್ಲಿ ಜೀತು ಎಂಬಾತನನ್ನು ಬಂಧಿಸಿ 2 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮೈಕೋ ಲೇಔಟ್:  ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ ಕಾರ್ತಿಕ್ ಎಂಬಾತನನ್ನು ಬಂಧಿಸಿರುವ ಪೊಲೀಸರು 6 ದ್ವಿಚಕ್ರ ವಾಹನ ಹಾಗೂ ಒಂದು ತ್ರಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಬೊಮ್ಮನಹಳ್ಳಿ: ಕನ್ನಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕಿ ಗೀತಾ ಎಂಬಾಕೆಯನ್ನು ಬಂಧಿಸಿ 64 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬೇಗೂರು: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವೀರಮಣಿ ಮತ್ತು ಧನುಷ್‍ನನ್ನು ಬಂಧಿಸಿ 20 ಗ್ರಾಂ ತೂಕದ ಆಭರಣ ವಶಪಡಿಸಿಕೊಂಡರೆ, ಅಶೋಕ್ ಎಂಬಾತನನ್ನು ಬಂಧಿಸಿ 4 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ: ಮೊಬೈಲ್‍ಗಳನ್ನು ಪಿಕ್‍ಪಾಕೆಟ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 80 ಸಾವಿರ ಬೆಲೆಯ 8 ಮೊಬೈಲ್ ಪೊನ್‍ಗಳು ಹಾಗೂ ರಶೀಕ್, ಗೋವಿಂದಸ್ವಾಮಿ, ಸುಬ್ರಮಣಿ ಎಂಬುವವರನ್ನು ಬಂಧಿಸಿ 30 ಸಾವಿರ ಬೆಲೆಯ ಕೇಬಲ್ ವಶಪಡಿಸಿಕೊಂಡಿದ್ದಾರೆ.

ಪರಪ್ಪನ ಅಗ್ರಹಾರ: ಲ್ಯಾಪ್‍ಟಾಪ್‍ಗಳನ್ನು ದೋಚುತ್ತಿದ್ದ ಪೆರಿಯಾರ್‍ಸ್ವಾಮಿ ಎಂಬಾತನನ್ನು 3 ಲಕ್ಷ ಬೆಲೆಯ ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ವೇಲು ಎಂಬಾತನನ್ನು ಬಂಧಿಸಿ 90 ಗ್ರಾಂ ಚಿನ್ನಾಭರಣ ಹಾಗೂ ಚೌಧರಿ, ದಾಮೋದರ್, ಅನಿಲ್‍ರಾವ್, ಆಕಾಶ್ ಎಂಬುವವರನ್ನು ಬಂಧಿಸಿ 44 ಮೊಬೈಲ್ ಪೊನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ತಿಲಕ್‍ನಗರ: ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಧೀರಜ್ ಮತ್ತು ದರ್ಶನ್ ಎಂಬುವವರನ್ನು ಬಂಧಿಸಿ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಎಚ್‍ಎಸ್‍ಆರ್ ಲೇಔಟ್: ಆರೋಪಿ ಸಯ್ಯದ್ ಮೋಸಿನ್ ಎಂಬಾತನನ್ನು ಬಂಧಿಸಿರುವ ಪೊಲೀಸರು 80 ಗ್ರಾಂ ತೂಕದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡರೆ ಮತ್ತೊಂದು ಪ್ರಕರಣದಲ್ಲಿ ಪವನ್‍ರಾವ್, ಪ್ರವೀಣ್ ಎಂಬುವವರನ್ನು ಬಂಧಿಸಿ 15 ಸಾವಿರ ಬೆಲೆಯ ಮೊಬೈಲ್ ವಶಪಡಿಸಿಕೊಂಡಿದ್ದು, ಇನ್ನೊಂದು ಪ್ರಕರಣದಲ್ಲಿ ಗೋವಿಂದಪ್ಪ ಎಂಬಾತನನ್ನು ಬಂಧಿಸಿ 3 ಲ್ಯಾಪ್‍ಟಾಪ್ ಹಾಗೂ ಹಫ್ತಾಬ್ ಮತ್ತು ಸಯ್ಯದ್ ಜುನೇದ್‍ನನ್ನು ಬಂಧಿಸಿ 10 ಸಾವಿರ ಬೆಲೆಯ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ಸಂತೋಷ್ ಎಂಬಾತನನ್ನು ಬಂಧಿಸಿ 4 ಲಕ್ಷ ಮೌಲ್ಯದ 10 ಬೈಕ್ ಹಾಗೂ ಆಟೋರಿಕ್ಷಾ ವಶಪಡಿಸಿಕೊಂಡರೆ ರಾಜು ಮತ್ತು ಇನಾಯತ್ ಎಂಬುವವರನ್ನು ಬಂಧಿಸಿ 90 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಡೆಪಾಳ್ಯ:ಕನ್ನಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರೀಶ್ ಎಂಬ ಆರೋಪಿಯನ್ನು ಬಂಧಿಸಿ 5.50 ಲಕ್ಷ ಮೌಲ್ಯದ ಮೂರು ಬೈಕ್‍ಗಳು ಹಾಗೂ 85 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Facebook Comments