ಜ್ಯೂವೆಲರಿ ಶಾಪ್‍ಗೆ ನುಗ್ಗಿ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ್ದ ಖದೀಮರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.22- ಹಾಡುಹಗಲೇ ಆಭರಣ ಮಳಿಗೆಗೆ ನುಗ್ಗಿ ಪಿಸ್ತೂಲಿನಿಂದ ಗುಂಡು ಹಾರಿಸಿ ಮಾಲೀಕರನ್ನು ಬೆದರಿಸಿ ದರೋಡೆಗೆ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ರಾಜಸ್ತಾನ ಹಾಗೂ ಹರಿಯಾಣ ಮೂಲದ ನಾಲ್ವರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ಬಾಲಾಜಿ ರಮೇಶ್ ಗಾಯಕ್ವಾಡ್ (25), ಹರಿಯಾಣದ ಬಲವಾನ್‍ಸಿಂಗ್ (24), ರಾಜಸ್ತಾನದ ಶ್ರೀರಾಮ ಬಿಶ್ನೋಯಿ (23) ಮತ್ತು ಓಂ ಪ್ರಕಾಶ್ (27) ಬಂಧಿತ ದರೋಡೆಕೋರರು. ಇವರೆಲ್ಲರೂ ಕೆಆರ್ ಪುರಂನಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು.

ಆರೋಪಿ ಬಾಲಾಜಿ ಬೆಳ್ಳಿ ಆಭರಣ ಕೆಲಸ ಮಾಡಿಕೊಂಡಿದ್ದರೆ, ಬಲವಾನ್‍ಸಿಂಗ್ ನಿರುದ್ಯೋಗಿಯಾಗಿದ್ದು, ಶ್ರೀರಾಮ ಬಿಶ್ನೋಯಿ ಮತ್ತು ಓಂ ಪ್ರಕಾಶ್ ಸ್ಟೀಲ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು.  ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ವೈಯಾಲಿಕಾವಲ್ ವ್ಯಾಪ್ತಿಯ ಸಾಮ್ರಾಟ್ ಜ್ಯುವೆಲ್ಸ್ ಅಂಗಡಿಗೆ ಮೂವರು ಕಪ್ಪು ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದಿದ್ದು, ಆಭರಣ ಕೊಳ್ಳುವ ನೆಪದಲ್ಲಿ ಒಳಗೆ ಹೋಗಿದ್ದಾರೆ. ಒಬ್ಬಾತ ಅಂಗಡಿ ಮಾಲೀಕರಾದ ಆಶಿಶ್ ಅವರಿಗೆ ಆಭರಣ ತೋರಿಸುವಂತೆ ಹೇಳಿದ್ದಾನೆ.

ಆಶಿಶ್ ಅವರು ಆಭರಣ ತೆಗೆಯುತ್ತಿದ್ದಂತೆ ಮತ್ತೊಬ್ಬ ದರೋಡೆಕೋರ ಏಕಾಏಕಿ ಪಿಸ್ತೂಲಿನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದಾಗ ಗುಂಡು ಮಳಿಗೆಯ ಛಾವಣಿಗೆ ತಗುಲಿದೆ. ತಕ್ಷಣ ಎಚ್ಚೆತ್ತುಕೊಂಡ ಆಶಿಶ್ ಹಾಗೂ ಅವರ ಪತ್ನಿ ದರೋಡೆಕೋರರತ್ತ ಮಳಿಗೆಯಲ್ಲಿದ್ದ ಚೇರುಗಳನ್ನು ಹಾಗೂ ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆದು ಸಹಾಯಕ್ಕಾಗಿ ಕೂಗಿಕೊಂಡಾಗ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದರು.

ತಕ್ಷಣ ಆಶಿಶ್ ಅವರು ವೈಯಾಲಿಕಾವಲ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಇನ್ಸ್‍ಪೆಕ್ಟರ್ ಯೋಗೇಂದ್ರಕುಮಾರ್ ಅವರು ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.

# ಮೂರು ತಂಡಗಳ ರಚನೆ:
ಆರೋಪಿಗಳ ಪತ್ತೆಗಾಗಿ ಇನ್ಸ್‍ಪೆಕ್ಟರ್ ಯೋಗೇಂದ್ರಕುಮಾರ್, ಸದಾಶಿವನಗರ ಇನ್ಸ್‍ಪೆಕ್ಟರ್ ನವೀನ್ ಸುಪೇಕರ್ ಹಾಗೂ ಶೇಷಾದ್ರಿಪುರಂ ಠಾಣೆ ಇನ್ಸ್‍ಪೆಕ್ಟರ್ ಸಂಜೀವ್‍ಗೌಡ ಅವರನ್ನೊಳಗೊಂಡ ಮೂರು ತಂಡಗಳನ್ನು ಶೇಷಾದ್ರಿಪುರಂ ಉಪವಿಭಾಗದ ಎಸಿಪಿ ನಿರಂಜನ್ ರಾಜೇ ಅರಸ್ ನೇತೃತ್ವದಲ್ಲಿ ರಚಿಸಲಾಗಿತ್ತು.

ಈ ತಂಡ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳ ಫುಟೇಜ್ ಪರಿಶೀಲಿಸಿ ದರೋಡೆಕೋರರ ಬಗ್ಗೆ ಮಾಹಿತಿ ಕಲೆಹಾಕಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಾಲ್ವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಆರೋಪಿಗಳಿಂದ ನಾಡ ಪಿಸ್ತೂಲು, ಗುಂಡುಗಳು ಹಾಗೂ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇತರೆ ಪ್ರಕರಣಗಳಲ್ಲೂ ಈ ಆರೋಪಿಗಳು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.

ದಂಪತಿ ಧೈರ್ಯ ಶ್ಲಾಘನೀಯ: ಜ್ಯುವೆಲರಿ ಅಂಗಡಿಯಲ್ಲಿದ್ದ ಆಶಿಶ್ ದಂಪತಿ ಸಮಯ ಪ್ರಜ್ಞೆಯಿಂದ ಆರೋಪಿಗಳನ್ನು ಹಿಮ್ಮೆಟ್ಟಿಸುವಲ್ಲಿ ತೋರಿದ ಧೈರ್ಯ ಶ್ಲಾಘನೀಯ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ತಂಡದ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆ ಶ್ಲಾಘನೀಯವಾಗಿದ್ದು, ಈ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಲಾಗಿದೆ.

Facebook Comments