ಬಯಲಾಯ್ತು ಇವೆಂಟ್ ಮ್ಯಾನೇಜರ್ ನಿಗೂಢ ಕೊಲೆ ರಹಸ್ಯ, : ಓಲಾ ಕ್ಯಾಬ್ ಡ್ರೈವರ್ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.23-ಪೊಲೀಸರಿಗೆ ಸವಾಲಾಗಿದ್ದ ಅಪರಿಚಿತ ಮಹಿಳೆಯ ಕೊಲೆ ಪ್ರಕರಣವನ್ನು ಬಾಗಲೂರು ಠಾಣೆ ಪೊಲಿಸರು ಬೇಧಿಸಿದ್ದು, ಆರೋಪಿ ಕ್ಯಾಬ್ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಗ್ಗನಹಳ್ಳಿಯ ಸಂಜೀವಿನಿನಗರ, 4ನೇ ಕ್ರಾಸ್‍ನಲ್ಲಿ ವಾಸವಾಗಿದ್ದ ಎಚ್.ಎಂ.ನಾಗೇಶ್(22) ಬಂಧಿತ ಕ್ಯಾಬ್ ಚಾಲಕ.

ಓಲಾ ಕ್ಯಾಬ್‍ನಲ್ಲಿ ವಿಮಾನನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಕೋಲ್ಕತ್ತಾಮೂಲದ ಇವೆಂಟ್ ಮ್ಯಾನೇಜರ್ ಆಗಿದ್ದ ಪೂಜಾಸಿಂಗ್ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.

ಬಾಗಲೂರು ಠಾಣಾ ಸರಹದ್ದಿನ ಕಾಡಯರಪ್ಪನಹಳ್ಳಿ ಗ್ರಾಮದ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಕಾಂಪೌಂಡ್ ಬಳಿ ಜು.31ರಂದು ಬೆಳಗ್ಗೆ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಈ ಮಹಿಳೆಯನ್ನು ಕತ್ತು ಕೊಯ್ದು, ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಚುಚ್ಚಿ, ತಲೆ ಮೇಲೆ ಹಾಲೋಬ್ಲಾಕ್‍ಅನ್ನು ಎತ್ತಿ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು.

ಈ ಬಗ್ಗೆ ಕಾಡಯರಪ್ಪನಹಳ್ಳಿ ಗ್ರಾಮದ ನಿವಾಸಿ ಮುನಿರಾಜು ಎಂಬುವವರು ಬಾಗಲೂರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೊಲೆಯಾದ ಅಪರಿಚಿತ ಮಹಿಳೆ ಯಾರು, ಯಾವ ಕಾರಣಕ್ಕಾಗಿ ಈ ಮಹಿಳೆಯನ್ನು ಕೊಲೆ ಮಾಡಿದ್ದಾರೆಂಬ ಬಗ್ಗೆ ತನಿಖೆ ಕೈಗೊಂಡಿದ್ದರು.

ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಭೀಮಾಶಂಕರ್ ಗುಳೇದ್ ಅವರು ಎರಡು ತಂಡಗಳನ್ನು ರಚಿಸಿದ್ದರು. ಒಂದು ತಂಡ ಮೃತ ಮಹಿಳೆಯ ಕೈಯಲ್ಲಿದ್ದ ಟೈಟಾನ್ ವಾಚು ಹಾಗೂ ಧರಿಸಿದ್ದ ನೀಲಿಬಣ್ಣದ ಜೀನ್ಸ್ ಪ್ಯಾಂಟ್ ಮೇಲೆ ಇದ್ದ ಬಾರ್‍ಕೋಡ್ ಆಧರಿಸಿ ದೇಶಾದ್ಯಂತ ಶಾಪಿಂಗ್ ಮಾಲ್ ಹಾಗೂ ಆನ್‍ಲೈನ್ ಶಾಪಿಂಗ್ ಸಂಸ್ಥೆಗಳ ಮೂಲಕ ಖರೀದಿ ಮಾಡಿರುವ ಗ್ರಾಹಕರ ಮಾಹಿತಿಯನ್ನು ಕಲೆ ಹಾಕಿ ಮಹಿಳೆಯ ಗುರುತು ಪತ್ತೆಗೆ ತನಿಖೆ ನಡೆಸುತ್ತಿತ್ತು.

ಈ ಪ್ರಕರಣಗಳಲ್ಲಿ ಮಹಿಳೆ ಧರಿಸಿದ್ದ ಉಂಗುರ ಹಾಗೂ ಚಹರೆ ಗಮನಿಸಿದ ಪೊಲೀಸರಿಗೆ, ಈಕೆ ಉತ್ತರ ಭಾರತ ಇಲ್ಲವೆ ಪಶ್ಚಿಮ ಬಂಗಾಳ ರಾಜ್ಯದ ಮಹಿಳೆ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಆಧಾರದ ಮೇಲೆ ಎರಡನೆ ತಂಡವನ್ನು ಪಶ್ಚಿಮ ಬಂಗಾಳ ಮತ್ತು ದೆಹಲಿಗೆ ಹೋಗಿ ಮೃತಳ ಬಗ್ಗೆ ಮಾಹಿತಿ ಸಂಗ್ರಹಿಸಲು ನೇಮಕ ಮಾಡಲಾಗಿತ್ತು.

‘ಅದರಂತೆ ಪಶ್ಚಿಮ ಬಂಗಾಳದ ಕೋಲ್ಕತ್ತ ನಗರಕ್ಕೆ ಹೋಗಿದ್ದ ಈ ತಂಡ, ಎಲ್ಲ ಪೊಲೀಸ್ ಠಾಣೆಗಳಿಗೂ ತೆರಳಿ ಅಪರಿಚಿತ ಮಹಿಳೆಯ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡು ವಿಚಾರಿಸುತ್ತಿತ್ತು.

ಈ ವೇಳೆ ಕೋಲ್ಕತ್ತಾ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಒಬ್ಬ ಮಹಿಳೆ ಕಾಣೆಯಾದ ಬಗ್ಗೆ ಮಾಹಿತಿ ಲಭಿಸಿದೆ.ಕಾಣೆಯಾದ ಮಹಿಳೆಯ ಚಹರೆ ಹಾಗೂ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆಯ ಕೊಲೆ ಪ್ರಕರಣದ ಅಪರಿಚಿತ ಮಹಿಳೆ ಚಹರೆ ಹೋಲಿಕೆಯಾಗುತ್ತಿದ್ದರಿಂದ ತಕ್ಷಣ ಮಹಿಳೆ ಸಂಬಂಧಿಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

ನಂತರ ಬೆಂಗಳೂರಿಗೆ ಸಂಬಂಧಿಕರನ್ನು ಕರೆಸಿ ಮೃತ ಮಹಿಳೆಯ ಫೋಟೋ, ಧರಿಸಿದ್ದ ಬಟ್ಟೆ, ವಾಚ್ ಮತ್ತು ಉಂಗುರವನ್ನು ತೋರಿಸಿದಾಗ ಈ ಮಹಿಳೆ ಸೌದೀಪ್ ದೇ ಎಂಬುವವರ ಪತ್ನಿ ಪೂಜಾಸಿಂಗ್‍ದೇ ಅವರದ್ದು ಎಂಬುದು ಖಾತ್ರಿಯಾಗಿದೆ.

ಪೂಜಾಸಿಂಗ್ ಅವರು ಇವೆಂಟ್ ಮ್ಯಾನೇಜರ್ ಆಗಿದ್ದು, ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಇವರು ಹೊಟೇಲ್ ರೂಮ್ ಮಾಡಿಕೊಂಡಿದ್ದು, ಜು.30ರಂದು ತಡರಾತ್ರಿ ಕೋಲ್ಕತ್ತಾಗೆ ತೆರಳಲು ಏರ್‍ಫೋರ್ಟ್‍ಗೆ ಹೋಗುವ ಸಲುವಾಗಿ ಕ್ಯಾಬ್ ಬುಕ್ ಮಾಡಿಕೊಂಡು ತೆರಳುತ್ತಿದ್ದರು. ಕ್ಯಾಬ್ ಚಾಲಕ ನಾಗೇಶ್ ಈ ಮಹಿಳೆಯನ್ನು ಗಮನಿಸಿ ಹೆಚ್ಚಿನ ಹಣವಿರಬಹುದೆಂದು ಭಾವಿಸಿ ಹಣದ ಆಸೆಗಾಗಿ ವಿಮಾನ ನಿಲ್ದಾಣದ ಹಿಂಭಾಗದ ಕಾಂಪೌಂಡ್ ಬಳಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದನು.

ಮಹಿಳೆಯ ಮೊಬೈಲ್‍ನಲ್ಲಿ ದಾಖಲಾಗಿದ್ದ ಕ್ಯಾಬ್‍ನ ವಿವರ ಪಡೆದು ಆರೋಪಿ ನಾಗೇಶ್‍ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಹಣದ ಆಸೆಗಾಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಮಹಿಳೆಯ ಕೊಲೆ ಪ್ರಕರಣ ಪತ್ತೆ ಕಾರ್ಯವನ್ನು ಅಪರ ಪೊಲೀಸ್ ಆಯುಕ್ತ ಮುರುಗನ್ ಮತ್ತು ಉಪ ಪೆÇಲೀಸ್ ಆಯುಕ್ತ ಭೀಮಾಶಂಕರ್ ಗುಳೇದ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳು ಈ ಪತ್ತೆಕಾರ್ಯವನ್ನು ಯಶಸ್ವಿಗೊಳಿಸಿವೆ.

Facebook Comments