ಗಾಂಜಾ ಮಾರಾಟ : ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.23-ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಯೊಬ್ಬನನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿ 5.30ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ವಂಶಿಕೃಷ್ಣ(31), ಸಿದ್ಧಾರ್ಥ್ ಸಂತೋಷ್(19) ಮತ್ತು ಅರವಿಂದ ಭಾಸ್ಕರ್(19) ಬಂಧಿತರು.

ವಂಶಿಕೃಷ್ಣ ಇನ್‍ಫೋಸಿಸ್‍ನಲ್ಲಿ ಉದ್ಯೋಗಿಯಾಗಿದ್ದರೆ, ಸಿದ್ಧಾರ್ಥ್ ಸಂತೋಷ್ ಮತ್ತು ಅರವಿಂದ ಭಾಸ್ಕರ್ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಮೂರನೇ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಈ ಮೂವರೂ ಸೇರಿಕೊಂಡು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸುದ್ದಗುಂಟೆ ಪಾಳ್ಯ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಆರೋಪಿಗಳಿಂದ 5 ಲಕ್ಷ 30 ಸಾವಿರ ಮೌಲ್ಯದ ಒಂದು ಕೆಜಿ 20 ಗ್ರಾಂ ಗಾಂಜಾ, 24 ಪೊಟ್ಟಣ ಎಲ್‍ಎಸ್‍ಡಿ ಮತ್ತು ಎಂಡಿಎಂಎ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಗೆ ಗೋವಾದಿಂದ ಮಾದಕ ವಸ್ತು, ಗಾಂಜಾ ಸರಬರಾಜು ಆಗುತ್ತಿದ್ದುದು ತೀವ್ರವಿಚಾರಣೆಯಿಂದ ಬೆಳಕಿಗೆ ಬಂದಿದೆ.

Facebook Comments