ಡ್ರಿಂಕ್ ಅಂಡ್ ಡ್ರೈವ್ : ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಟ್ಸಾಪ್ ಗ್ರೂಪ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ಕುಡಿದು ವಾಹನ ಚಲಾಯಿಸುವ ಯುವಕರು ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಟ್ಸಾಪ್  ಗ್ರೂಪ್ ಮಾಡಿಕೊಂಡಿದ್ದು ಎಲ್ಲೆಲ್ಲಿ ತಪಾಸಣೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಹಂಚಿಕೊಂಡು ಬೇರೆ ದಾರಿಯಲ್ಲಿ ಹೋಗುತ್ತಿದ್ದಾರೆಂದು ಸಾರ್ವಜನಿಕರು ಪೊಲೀಸ್ ಆಯುಕ್ತರಿಗೆ ತಿಳಿಸಿದರು.

ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ದೂರುಗಳ ಸುರಿಮಳೆಯನ್ನೆ ಸುರಿಸಿದರು.
ಅನಗತ್ಯವಾಗಿ ಬಹಳಷ್ಟು ಕಡೆ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಬಹಳಷ್ಟು ಕಡೆ ಯೂಟರ್ನ್‍ಗಳು ಹೆಚ್ಚಾಗಿವೆ. ಇದರಿಂದ ಸಂಚಾರ ಸುಗಮಗೊಳ್ಳುವ ಬದಲು ಕಷ್ಟವಾಗುತ್ತಿದೆ. ಬಸವನಗುಡಿಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲೂ ವಾಹನಗಳು ನಿಂತಿರುತ್ತವೆ ಎಂದು ಸಾರ್ವಜನಿಕರು ದೂರು ನೀಡಿದರು.

ಆಂಬ್ಯುಲೆನ್ಸ್ ಮತ್ತು ತುರ್ತು ವಾಹನಗಳಿಗೆ ಪ್ರತ್ಯೇಕವಾದ ದಾರಿ ಮಾಡಿಕೊಡಬೇಕು ಎಂದು ಸಾರ್ವಜನಿಕರು ಸಲಹೆ ನೀಡಿದರು. ನಗರದ ಹೊರವಲಯ ಹಾಗೂ ಪ್ರಮುಖ ಪ್ರದೇಶಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸುಲ್ತಾನ್ ಪೇಟೆ, ಚಿಕ್ಕಪೇಟೆಗಳಲ್ಲಿ ರಸ್ತೆ ಅಗೆದು ಮಣ್ಣನ್ನು ನಡು ರಸ್ತೆಯಲ್ಲಿ ಬಿಟ್ಟಿದ್ದಾರೆ. ಇದರಿಂದ ಸಾರ್ವಜನಿಕರು ಓಡಾಡುವುದು ಕಷ್ಟವಾಗುತ್ತಿದೆ.

ಟೆಂಡರ್ ಶೂರ್ ರಸ್ತೆಗಳ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಗಿಯದಿರುವುದರಿಂದ ಸಂಚಾರದ ಸಮಸ್ಯೆ ವಿಪರೀತವಾಗಿದೆ. ಕಾನೂನು ಸುವ್ಯವಸ್ಥೆ ಕೂಡ ಹದಗೆಡುತ್ತಿದೆ. ಟ್ರಾಫಿಕ್ ಪೊಲೀಸರು ಸಂಚಾರ ನಿಯಂತ್ರಣ ಮಾಡುವುದರ ಬದಲು ದಂಡ ವಸೂಲಿಗೆ ಹೆಚ್ಚಿನ ಗಮನಕೊಡುತ್ತಾರೆ.

ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ನಿಯಮ ಪಾಲಿಸುತ್ತಿಲ್ಲ, ಬೆಂಗಳೂರಿನ ನಗರದಲ್ಲಿ ಗುಂಡಿಗಳು ಹೆಚ್ಚಾಗಿವೆ. ಬಿಟಿಎಂ
ಲೇಔಟ್‍ನಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ.  ಆರ್.ಟಿ.ನಗರದಲ್ಲಿ ಬೈಕ್ ವಿಲಿಂಗ್‍ಗಳ ಕಾಟ ಹೆಚ್ಚಾಗಿದೆ. ಎಚ್.ಬಿ.ಆರ್ ಲೇಔಟ್‍ನಲ್ಲಿ ಸಿಗ್ನಲ್‍ಗಳಿಲ್ಲ. ಮೆಟ್ರೋ ಸ್ಟೇಶನ ಕೆಳಗೆ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಡಿ. ಮೀರರ್ ಇಲ್ಲದೆ ವಾಹನ ಓಡಿಸುವುದರಿಂದ
ಅಪಾಯಗಳು ಹೆಚ್ಚಿವೆ. ಅವುಗಳಿಗೆ ದಂಡ ಹಾಕಿ ಎಂಬಿತ್ಯಾದಿ ಸಲಹೆಗಳು ಕೇಳಿ ಬಂದವು.

ಸಮಸ್ಯೆ ಆಲಿಸಿ ಪೊಲೀಸರಿಗೆ ಭಾಸ್ಕರ್‍ರಾವ್ ಕಿವಿಮಾತುಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಯವರು ಸಂಚಾರಿ ನಿಯಮ ಹಾಗೂ ಸಮಸ್ಯೆಗಳ ಬಗ್ಗೆ ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸಬೇಕೆಂದು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಪೊಲೀಸ್ ಆಯುಕ್ತರ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ನಗರ ಸಂಚಾರಿ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಜನಸ್ಪಂದನ-2019 ಸಭೆಯ ಲ್ಲಿ ಮಾತನಾಡಿದರು. ಸಭೆಯಲ್ಲಿ ನಗರದಾದ್ಯಂತ ಎಲ್ಲ ವಲಯಗಳಿಂದ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಯವರು ಪಾಲ್ಗೊಂಡು ಸಂಚಾರಿ ಸಮಸ್ಯೆಗಳ ಬಗ್ಗೆ ವಿವರವಾಗಿ ಸಲಹೆ ಸೂಚನೆ ನೀಡಿದರು.

ಸಭೆಗೆ ಎಲ್ಲ ಸರ್ಕಾರಿ ಇಲಾಖಾ ವತಿಯಿಂದ ಬಿಬಿಎಂಪಿ, ಬಿಡಬ್ಲೂಎಸ್‍ಎಸ್‍ಬಿಯಾದಿಯಾಗಿ ಸಂಬಂಧಿಸಿದ ಎಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.ಸಾರ್ವಜನಿಕರು ನೀಡಿದ ಸಂಚಾರಿ ನಿಯಮಗಳು ಮತ್ತು ಸಮಸ್ಯೆಗಳ ಬಗ್ಗೆ ದೂರು ಮತ್ತು ಸಲಹಾ ಸೂಚನೆಗಳನ್ನು ಆಲಿಸಿದ ಅಧಿಕಾರಿಗಳು, ತಮ್ಮ ಸಲಹೆಗಳನ್ನು ಪರಿಹರಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಐಐಬಿಎಂನ ಡಾ. ಭಟ್ಟಾಚಾರ್ಯ, ನವದೆಹಲಿಯ ಐಆರ್‍ಟಿಇ ಹರೀಶ್, ಟಿಟಿಐಸಿ ಸಂಜೀವ್, ಪ್ರೊ. ಆಸಿಸ್ ವರ್ಮಾ, ಪ್ರೊ.ಪ್ರಿಯರಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಉಪಪೊಲೀಸ್ ಆಯುಕ್ತ ಕೆ.ವಿ.ಜಗದೀಶ್, ಸಂಚಾರಿ ವಲಯದ ಸೌಮ್ಯಲತಾ, ಷಾರಾ ಫಾತೀಮಾ ಹಾಗೂ ಇತರೆ ಸಂಚಾರಿ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments