ವಾಕಿಂಗ್ ಮಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ 8 ಮಂದಿ ಸರಗಳ್ಳರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ವಾಯು ವಿಹಾರಕ್ಕೆ ಹೋಗುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರಗಳನ್ನು ಎಗರಿಸುತ್ತಿದ್ದ ಎಂಟು ಮಂದಿ ಖತರ್ನಾಕ್ ಸರಗಳ್ಳರನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ರೂ. ಮೌಲ್ಯದ 420ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸಯ್ಯದ್ ಮೊಹಸೀನ್, ಅಬ್ದುಲ್, ಯೂಸುಫ್, ಇರ್ಫಾನ್, ಮುಜಾಹಿದ್ ಷಾ ಹಾಗೂ ಕಾನೂನು ಸಂಘರ್ಷಕೊಳ್ಳಗಾದ ಬಾಲಕ ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಬಂಧನದಿಂದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಸರಗರ್ಳಳತನ, ದರೋಡೆ, ಮೊಬೈಲ್ ಕಳ್ಳತನ ಸೇರಿ 17 ಪ್ರಕರಣಗಳು ಪತ್ತೆಯಾದಂತಾಗಿದೆ.
ಬೆಳಗಿನ ಜಾವ ಹಾಗೂ ಸಂಜೆ ವೇಳೆ ವಾಯು ವಿಹಾರ ಮಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರೋಪಿಗಳು ಸಮಯ ಸಾಧಿಸಿ ಬೈಕ್‍ಗಳಲ್ಲಿ ಸುತ್ತಾಡುತ್ತಾ ಸರಗಳನ್ನು ಎಗರಿಸುತ್ತಿದ್ದುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಆರೋಪಿಗಳು ಸರಗಳ್ಳತನ ನಡೆಸಿ ಪರಾರಿಯಾಗುತ್ತಿದ್ದ ಸ್ಥಳಗಳಲ್ಲಿನ ಸಿಸಿ ಟಿವಿಯ ಪೂಟೇಜ್ ಪರಿಶೀಲನೆ ನಡೆಸಿ ಅವರು ಧರಿಸಿದ್ದ ಬಟ್ಟೆ ಮೇಲಿನ ಲೋಗೋ ಹಾಗೂ ಹೆಲ್ಮೆಟ್ ಆಧರಿಸಿ ಸರಗಳ್ಳರ ಬೇಟೆಯಾಡಿದ ಪೊಲೀಸರು ಎಂಟು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಲಕ್ಷ ಮೌಲ್ಯದ 420 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments