ಚಾಕುವಿನಿಂದ ಚುಚ್ಚಿ ಯುವಕನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.12- ಹೊಟೇಲ್‍ವೊಂದರ ಬಳಿ ಜಗಳ ನಡೆದು ಯುವಕನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ನಗರದ ಇಟ್ಟುಮಡುವಿನಲ್ಲಿ ವಾಸವಾಗಿದ್ದ, ಮೂಲತಃ ಕುಣಿಗಲ್‍ನ ವೆಂಕಟೇಶ್ (36) ಕೊಲೆಯಾದ ಯುವಕ. ಕಳೆದ ಮೂರು ವರ್ಷಗಳ ಹಿಂದೆ ವೆಂಕಟೇಶ್ ಬಾರ್‍ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ತದನಂತರ ಕೆಲಸ ತೊರೆದಿದ್ದನು.

ರಾತ್ರಿ ಇಟ್ಟುಮಡು ಮುಖ್ಯರಸ್ತೆಯಲ್ಲಿನ ಬಾರ್ ಪಕ್ಕದಲ್ಲಿರುವ ಮಿಲಿಟರಿ ಹೋಟೆಲ್‍ಗೆ ಊಟಕ್ಕೆಂದು ವೆಂಕಟೇಶ್ ಹೋಗಿದ್ದಾಗ ಕ್ಷುಲ್ಲಕ ವಿಚಾರಕ್ಕೆ ಮೂವರು ಯುವಕರು ಬೇರೊಬ್ಬರ ಜತೆ ಜಗಳವಾಡುತ್ತಿದ್ದರು. ಇದನ್ನು ಗಮನಿಸಿದ ವೆಂಕಟೇಶ್ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದಾಗ ಮೂವರು ಯುವಕರು ಸೇರಿ ಈತನೊಂದಿಗೆ ಜಗಳವಾಡಿ ಚಾಕುವಿನಿಂದ ಬಲವಾಗಿ ಚುಚ್ಚಿ ಪರಾರಿಯಾಗಿದ್ದರು.

ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡಿದ್ದ ವೆಂಕಟೇಶನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸ್ಥಳದಲಿದ್ದ ಸಿಸಿ ಟಿವಿ ಪರಿಶೀಲಿಸಿ ಪರಾರಿಯಾಗಿದ್ದ ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments