ಹೊಸ ಟ್ರಾಫಿಕ್ ರೂಲ್ಸ್ : ಬೆಂಗಳೂರಲ್ಲಿ 24 ಗಂಟೆಯೊಳಗೆ 20 ಲಕ್ಷ ದಂಡ ವಸೂಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.12- ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಿಂದಾಗಿ ಸಂಚಾರಿ ನಿಯಮ ಉಲ್ಲಂಘನೆಗೆ ಸವಾರರು ದುಬಾರಿ ದಂಡ ತೆತ್ತುತ್ತಿದ್ದು, ಸಂಚಾರಿ ಪೊಲೀಸರು 24 ಗಂಟೆಯೊಳಗೆ 6350 ಪ್ರಕರಣಗಳನ್ನು ದಾಖಲಿಸಿಕೊಂಡು 20,55,200ರೂ. ದಂಡ ವಸೂಲಿ ಮಾಡಿದ್ದಾರೆ.

ನಗರ ಸಂಚಾರಿ ಪೊಲೀಸರು ನಿನ್ನೆ ಬೆಳಗ್ಗೆ 10 ಗಂಟೆಯಿಂದ ಇಂದು ಬೆಳಗ್ಗೆ 10 ಗಂಟೆವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 20,55 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಪ್ರಮುಖವಾಗಿ ಮೊಬೈಲ್‍ನಲ್ಲಿ ಮಾತನಾಡುತ್ತ ವಾಹನ ಚಾಲನೆ ಪ್ರಕರಣದಲ್ಲಿ 234 ಮಂದಿಯಿಂದ 68,600ರೂ. ದಂಡ ವಸೂಲಿ ಮಾಡಿದರೆ, ಸಿಗ್ನಲ್ ಜಂಪ್ ಪ್ರಕರಣದಲ್ಲಿ 886 ಪ್ರಕರಣ ದಾಖಲಿಸಿಕೊಂಡು 1.49 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ಹೆಲ್ಮೆಟ್ ರಹಿತ ಚಾಲನೆಗೆ 1274 ಪ್ರಕರಣ ದಾಖಲಿಸಿಕೊಂಡು 2.82 ಲಕ್ಷ ರೂ. ದಂಡ ವಿಧಿಸಲಾಗಿದೆ. ಇನ್ನುಳಿದಂತೆ ನಿಯಮ ಬಾಹಿರವಾಗಿ ಉದ್ದದ ಸರಕು ಸಾಗಣೆ, ರಾಂಗ್ ಪಾರ್ಕಿಂಗ್, ಏಕಮುಖ ಸಂಚಾರದಲ್ಲಿ ಚಾಲನೆ, ನೋ ಎಂಟ್ರಿ ಸ್ಥಳದಲ್ಲಿ ಚಾಲನೆ, ಅತಿವೇಗ, ಚಾಲನಾ ಪರವಾನಗಿ ರಹಿತ ಚಾಲನೆ ಸೇರಿದಂತೆ ವಿವಿಧ ಸಂಚಾರಿ ಉಲ್ಲಂಘನೆಗಳಿಗೆ ನಗರ ಸಂಚಾರಿ ಪೊಲೀಸರು ದಂಡ ವಿಧಿಸಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.

Facebook Comments