ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ, 21 ಮಂದಿ ಬಂಧನ : 90.20 ಲಕ್ಷ ರೂ. ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.16- ನಗರದ ಆಗ್ನೇಯ ವಿಭಾಗದ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 21 ಮಂದಿಯನ್ನು ಬಂಧಿಸಿ 90.20 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ 51 ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಒಟ್ಟಾರೆ 440 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿ ವಸ್ತುಗಳು, 47 ದ್ವಿಚಕ್ರ ವಾಹನ, 2 ನಾಲ್ಕು ಚಕ್ರದ ವಾಹನಗಳು, 4 ಸಾವಿರ ಹಣ ಮತ್ತು 22 ಕೆಜಿ 500 ಗ್ರಾಂ ಗಾಂಜಾ, 50 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಚ್‍ಎಸ್‍ಆರ್ ಲೇಔಟ್ 9 ಪ್ರಕರಣಗಳು, ಆಡುಗೋಡಿ 2, ಕೋರಮಂಗಲ 30, ಪರಪ್ಪನ ಅಗ್ರಹಾರ ಪೊಲೀಸರು 10 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

30 ಬೈಕ್‍ಗಳ ವಶ: ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಅವುಗಳನ್ನು ಡೈರೆಕ್ಟ್ ಮಾಡಿಕೊಂಡು ಕಳವು ಮಾಡಿ ನಂತರ ನಂಬರ್ ಪ್ಲೇಟ್‍ಗಳನ್ನು ತೆಗೆದು ಆಂಧ್ರಪ್ರದೇಶದ ಕಡಪ ಜಿಲ್ಲೆ ಸುತ್ತಮುತ್ತಲ ಕಡೆಗಳಲ್ಲಿ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ವಕೀಲರಿಗೆ ಮತ್ತು ಮೋಜು-ಮಸ್ತಿಗಾಗಿ ಬಳಸಿಕೊಳ್ಳುತ್ತಿದ್ದ ಐದು ಮಂದಿಯನ್ನು ಬಂಧಿಸಿ 45.20 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಯ 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬುಲೆಟ್ ವಾಹನಗಳಲ್ಲಿ ಲಾಂಗ್‍ಡ್ರೈವ್ ಹೋಗುವುದು, ಜಾಲಿರೈಡ್ ಮಾಡುವ ಹವ್ಯಾಸ ಹೊಂದಿದ್ದು, ಐಷಾರಾಮಿ ಜೀವನ ಮಾಡುವ ಉದ್ದೇಶದಿಂದ ಬೈಕ್ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಎಚ್‍ಎಸ್‍ಆರ್ ಲೇಔಟ್: ರಾತ್ರಿ ವೇಳೆ ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಐದು ಮಂದಿಯನ್ನು ಬಂಧಿಸಿ 20 ಲಕ್ಷ ರೂ. ಬೆಲೆಬಾಳುವ 440 ಗ್ರಾಂ ಚಿನ್ನಾಭರಣ, ವಜ್ರದ ಆಭರಣಗಳು, 450ಗ್ರಾಂ ಬೆಳ್ಳಿ ಸಾಮಾನುಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿ ದ್ದಾರೆ.

ಆರು ದ್ವಿಚಕ್ರ ವಾಹನ ವಶ: ನಗರದ ಹೊಸೂರು ರಸ್ತೆಯ ಅಕ್ಕಪಕ್ಕದ ಏರಿಯಾಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದ ಇಬ್ಬರನ್ನು ಬಂಧಿಸಿ 3 ಲಕ್ಷ ರೂ. ಬೆಲೆಬಾಳುವ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಾಂಜಾ ವಶ: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಿ ಅವರನ್ನು ಮಾದಕ ವ್ಯಸನಿಗಳಾಗಲು ಪ್ರೇರೇಪಿಸುತ್ತಿದ್ದ ಕೇರಳ ರಾಜ್ಯದ ಏಳು ಮಂದಿಯನ್ನು ಬಂಧಿಸಿ 9 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಜಾಲಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.

ಆಡುಗೋಡಿ: ಮನೆ ಮುಂದೆ ನಿಲ್ಲಿಸಲಾಗಿದ್ದ ಟಾಟಾಏಸ್ ವಾಹನವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಬೆಲೆಬಾಳುವ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಾಸಿಂಪಾಷ ತನ್ನ ಸ್ನೇಹಿತನಾದ ಬೊಮ್ಮನಹಳ್ಳಿ ನಿವಾಸಿ ಸೈಫ್ ಎಂಬಾತನ ಜತೆ ಸೇರಿಕೊಂಡು ಲಕ್ಕಸಂದ್ರದ ಮನೆ ಮುಂದೆ ನಿಂತಿದ್ದ ಟಾಟಾಏಸ್ ವಾಹನ ಮತ್ತು ಜಿಕೆವಿಕೆ ರಸ್ತೆಯಲ್ಲಿ ನಿಂತಿದ್ದ ಟಾಟಾಏಸ್ ವಾಹನವನ್ನು ಕಳ್ಳತನ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ: ಮೋಜು-ಮಸ್ತಿಗಾಗಿ ಕಳವು ಮಾಡಿದ್ದ 10 ದ್ವಿಚಕ್ರ ವಾಹನಗಳನ್ನು ಆರೋಪಿ ನರೇಶ್ ಎಂಬಾತನಿಂದ ವಶಪಡಿಸಿಕೊಂಡಿದ್ದು, ಇವರ ಒಟ್ಟು ಮೌಲ್ಯ 7 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ಈ ಕಾರ್ಯವನ್ನು ನಗರ ಪೊಲಿಇಸ್ ಆಯುಕ್ತರು ಶ್ಲಾಘಿಸಿದ್ದಾರೆ.

Facebook Comments