ಹುಕ್ಕಾ ಪಾರ್ಲರ್-ಕ್ಲಬ್ ಮೇಲೆ ಸಿಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಕಾನೂನು ಬಾಹಿರವಾಗಿ ಹುಕ್ಕಾ ಪಾರ್ಲರ್‍ಗಳನ್ನು ತೆರೆದು ಹುಕ್ಕಾ ಸೇದಲು ಪ್ರಚೋದಿಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಹುಕ್ಕಾ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ 6ನೆ ಬ್ಲಾಕ್‍ನಲ್ಲಿ ಅಂಕಲ್ ಜಾನಿ ಕೆಫೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಪಾರ್ಲರ್ ತೆರೆದು ಯಾವುದೇ ನಿಯಮಾವಳಿಗಳನ್ನು ಪಾಲಿಸದೆ ಯುವಕ-ಯುವತಿಯರಿಗೆ ಹುಕ್ಕಾ ಸೇದಲು ಪ್ರಚೋದಿಸಿ ಮಾದಕ ವ್ಯಸನಿಗಳಾಗಲು ಪ್ರಚೋದಿಸುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಹುಕ್ಕಾ ಪಾರ್ಲರ್ ಮೇಲೆ ದಾಳಿ ಮಾಡಿ ವ್ಯಕ್ತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಲಬ್ ಮೇಲೆ ದಾಳಿ: ಮತ್ತೊಂದು ಪ್ರಕರಣದಲ್ಲಿ ಕೆಆರ್ ಪುರಂ ವ್ಯಾಪ್ತಿಯ ಹಳೆ ಮದ್ರಾಸ್ ರಸ್ತೆಯ ಸುಭಾಷ್ ನಗರದಲ್ಲಿ ಎಂಎಂ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‍ನಲ್ಲಿ ಸದಸ್ಯರಲ್ಲದ ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕ್ಲಬ್ ಮೇಲೆ ದಾಳಿ ಮಾಡಿ ಕ್ಯಾಷಿಯರ್ ಸೇರಿದಂತೆ 16 ಮಂದಿಯನ್ನು ಬಂಧಿಸಿ 70,680ರೂ. ಹಣ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments