ಉದ್ಯಮಿ ಮಗನ ಅಪಹರಿಸಿದ್ದ  ಆರೋಪಿಗಳಿಗೆ ಪೊಲೀಸರಿಂದ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಉದ್ಯಮಿ ಪುತ್ರ ಹಾಗೂ ಕಾರು ಚಾಲಕನನ್ನು ಅಪಹರಿಸಿ ಮೂರು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಕಿಡ್ನಾಪರ್ಸ್‍ಗಳ ಕಾಲಿಗೆ ಗುಂಡು ಹಾರಿಸಿ ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿಯುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ತಂಗಬಾಲ, ಪ್ರಶಾಂತ್ ಮತ್ತು ನವೀನ್ ಗುಂಡೇಟಿನಿಂದ ಗಾಯಗೊಂಡಿರುವ ಅಪಹರಣಕಾರರು.ಅಪಹರಣಕಾರರಿಂದ ಕಿಡ್ನಾಪ್‍ಗೊಳಗಾಗಿದ್ದ ಶ್ರೇಯಸ್ ಮೋಟಾರ್ಸ್ ಸಂಸ್ಥೆ ಮಾಲೀಕ ಸಿದ್ದರಾಜು ಅವರ ಪುತ್ರ ಹೇಮಂತ್ (16) ಹಾಗೂ ಆತನ ಕಾರು ಚಾಲಕ ಕೇಶವರೆಡ್ಡಿ ಅವರನ್ನು ರಕ್ಷಿಸಲಾಗಿತ್ತು.

ಕಳೆದ ತಿಂಗಳ 26ರಂದು ಶ್ರೇಯಸ್ ಮೋಟಾರ್ಸ್ ಸಂಸ್ಥೆ ಮಾಲೀಕ ಸಿದ್ದರಾಜು ಅವರ ಪುತ್ರ ಹೇಮಂತ್ (16) ಹಾಗೂ ಆತನ ಕಾರು ಚಾಲಕ ಕೇಶವರೆಡ್ಡಿಯನ್ನು ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಿಸಲಾಗಿತ್ತು. ತನ್ನ ಕಾರು ಚಾಲಕನೊಂದಿಗೆ ಟ್ಯೂಷನ್‍ಗೆ ತೆರಳುತ್ತಿದ್ದ ಹೇಮಂತ್‍ನನ್ನು ನಾಲ್ವರು ಅಪಹರಣಕಾರರು ಅಪಹರಿಸಿ ಮೂರು ಕೋಟಿ ರೂ.ಗಳಿಗೆ ಡಿಮ್ಯಾಂಡ್ ಇಟ್ಟಿದ್ದರು.

ಅಪಹರಣಕಾರರ ಪತ್ತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿವೈಎಸ್‍ಪಿಗಳು, ಸರ್ಕಲ್ ಇನ್ಸ್‍ಪೆಕ್ಟರ್‍ಗಳು, ಸಬ್‍ಇನ್ಸ್‍ಪೆಕ್ಟರ್‍ಗಳು ಸೇರಿದಂತೆ ಒಟ್ಟು 35 ಮಂದಿ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಅಪಹರಣಕಾರರ ಸುಳಿವು ಆಧರಿಸಿ ಬೇಡಿಕೆ ಹಣದಲ್ಲಿ ಒಂದೂವರೆ ಕೋಟಿ ಹಣ ನೀಡುವುದಾಗಿ ಪೊಲೀಸರು ನಂಬಿಸಿದ್ದರು.  ಅಪಹರಣಕಾರರಿಗೆ ಪೊಲೀಸರು ತಮ್ಮನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಎಂಬ ಸುಳಿವು ಸಿಕ್ಕಿರಲಿಲ್ಲ.

ಹೀಗಾಗಿ ಕನಕಪುರ ನೈಸ್‍ರೋಡ್‍ನಲ್ಲಿ ಒಂದೂವರೆ ಕೋಟಿ ರೂ. ಹಣ ಇಡಲಾಗಿದೆ ಎಂಬ ಮಾತನ್ನು ನಂಬಿ ಹಣ ಎತ್ತಿಕೊಳ್ಳಲು ಆರೋಪಿ ಬಂದಿದ್ದಾನೆ. ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಆರೋಪಿ ನವೀನ್ ಹಣ ಪಡೆದುಕೊಳ್ಳಲು ಬಂದಾಗ ಹೊಸಕೋಟೆ ಉಪವಿಭಾಗದ ಡಿವೈಎಸ್‍ಪಿ ಸಕ್ರಿ ಅವರ ತಂಡ ಬಂಧಿಸಲು ಹೋದಾಗ ಆನೇಕಲ್ ಸಬ್‍ಇನ್ಸ್‍ಪೆಕ್ಟರ್ ಹೇಮಂತ್‍ಕುಮಾರ್ ಅವರಿಗೆ ಆರೋಪಿ ಡ್ರ್ಯಾಗರ್‍ನಿಂದ ಎಡತೋಳಿಗೆ ಚುಚ್ಚಿ ಗಾಯಗೊಳಿಸಿದ.

ಕೂಡಲೇ ಹೇಮಂತ್‍ಕುಮಾರ್ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಅವನ ಬಲಗೈಗೆ ಬಿದ್ದು ಕುಸಿದುಬಿದ್ದ. ತಕ್ಷಣ ಅವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಉಳಿದ ಆರೋಪಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜನಪ್ರಿಯ ಟೌನ್‍ಶಿಪ್ ಮುಂದಿನ ನೀಲಗಿರಿ ತೋಪಿನಲ್ಲಿ ಇದ್ದಾರೆಂಬ ಮಾಹಿತಿ ಲಭಿಸಿತು.

ತಕ್ಷಣ ಮಾದನಾಯಕನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಕೆ.ಪಿ.ಸತ್ಯನಾರಾಯಣ್, ದೊಡ್ಡಬಳ್ಳಾಪುರ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ರಾಘವೇಂದ್ರ ಅವರುಗಳ ತಂಡ ಆರೋಪಿಗಳನ್ನು ಹಿಡಿಯಲು ಬೆನ್ನಟ್ಟಿ ಹೋದಾಗ ತಾವು ಅಪಹರಿಸಿದ್ದ ಹೇಮಂತ್ ಮತ್ತು ಕೇಶವರೆಡ್ಡಿ ಅವರನ್ನು ಡ್ರ್ಯಾಗರ್‍ನಿಂದ ಚುಚ್ಚಿ ಸಾಯಿಸುವುದಾಗಿ ಬೆದರಿಕೆ ಹಾಕಿದರು.ಆ ಸಮಯದಲ್ಲಿ ಅವರನ್ನು ರಕ್ಷಿಸಲು ಹೋದ ಕಾನ್ಸ್‍ಟೆಬಲ್ ಮಧುಕುಮಾರ್ ಅವರಿಗೆ ಆರೋಪಿ ಪ್ರಶಾಂತ್ ಬಲತೋಳಿಗೆ ಡ್ರ್ಯಾಗರ್‍ನಿಂದ ಚುಚ್ಚಿದ. ನಂತರ ಸತ್ಯನಾರಾಯಣ್ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಪ್ರಶಾಂತ್‍ನ ಎಡಗಾಲಿಗೆ ತಗುಲಿ ಕುಸಿದುಬಿದ್ದ.

ಮತ್ತೊಬ್ಬ ಆರೋಪಿ ತಂಗಬಾಲ ಎಂಬಾತ ಪಿಎಸ್‍ಐ ಮುರಳೀಧರ್ ಅವರ ಎಡಗೈಗೆ ಡ್ರ್ಯಾಗರ್‍ನಿಂದ ಹಲ್ಲೆ ನಡೆಸಿದ. ಆ ಸಮಯದಲ್ಲಿ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಎಡಗಾಲಿಗೆ ಮತ್ತು ದೊಡ್ಡಬಳ್ಳಾಪುರ ಸರ್ಕಲ್ ಇನ್ಸ್‍ಪೆಕ್ಟರ್ ರಾಘವೇಂದ್ರ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಬಲಗಾಲಿಗೆ ತಗುಲಿ ಕುಸಿದುಬಿದ್ದ.

ತಕ್ಷಣ ಮೂವರು ಆರೋಪಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.  ಅಪಹೃತ ಪಿಯುಸಿ ವಿದ್ಯಾರ್ಥಿ ಹೇಮಂತ್ ಮತ್ತು ಅವರ ಕಾರುಚಾಲಕ ಕೇಶವರೆಡ್ಡಿ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಕೇಂದ್ರ ವಲಯದ ಐಜಿಪಿ ಶರತ್‍ಚಂದ್ರ ಅವರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments