ಬಾರ್‌ನಲ್ಲಿ ಖಾಸಗಿ ಕಂಪೆನಿ ನೌಕರನ ಹತ್ಯೆ, ಆರೋಪಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ಕ್ಷುಲ್ಲಕ ವಿಚಾರಕ್ಕೆ ಬಾರ್‍ನಲ್ಲಿ ಖಾಸಗಿ ಕಂಪೆನಿ ನೌಕರನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಿಲಕ್‍ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಖಾಸಗಿ ಕಂಪೆನಿ ಯೊಂದ ರಲ್ಲಿ ಅಕೌಂಟೆಂಟ್ ಆಗಿದ್ದ ಬೈರಸಂದ್ರದ ನಿವಾಸಿ ಕಿಶೋರ್ ಕುಮಾರ್ (32) ಕೊಲೆಯಾದ ದುರ್ದೈವಿ.

ನಿನ್ನೆ ಮಧ್ಯಾಹ್ನ ಜಯನಗರ 9ನೇ ಬ್ಲಾಕ್ ಈಸ್ಟ್‍ಎಂಡ್ ರಸ್ತೆಯಲ್ಲಿರುವ ಬಾರ್‍ವೊಂದಕ್ಕೆ ಕಿಶೋರ್‍ಕುಮಾರ್ ತನ್ನ ಸ್ನೇಹಿತ ಯೂಸುಫ್ ಜತೆ ಹೋಗಿದ್ದಾರೆ.ಇವರಿಬ್ಬರು ಒಂದು ಟೇಬಲ್‍ನಲ್ಲಿ ಕುಳಿತಿದ್ದರು. ಇವರ ಪಕ್ಕದ ಮತ್ತೊಂದು ಟೇಬಲ್‍ನಲ್ಲಿ ತಬರೇಜ್, ಆನಂದ್, ಮಧು ಮತ್ತು ಅಪರ್ಣ (ಮಂಗಳಮುಖಿ) ಕುಳಿತಿದ್ದರು.

ಈ ವೇಳೆ ಈ ನಾಲ್ವರು ಸೇರಿಕೊಂಡು ಮದ್ಯ ಸೇವಿಸುತ್ತಾ ಜೋರಾಗಿ ಕೇಕೆ ಹಾಕುತ್ತಿದ್ದಾಗ ಕಿಶೋರ್‍ಕುಮಾರ್ ಕಿರುಚಾಡಬೇಡಿ, ನಿಧಾನವಾಗಿ ಮಾತನಾಡಿ ಎಂದು ಹೇಳಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಗುಂಪು ಈತನೊಂದಿಗೆ ಜಗಳಕ್ಕಿಳಿದಾಗ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ತಬರೇಜ್ ಚಾಕುವಿನಿಂದ ಕಿಶೋರನ ಹೊಟ್ಟೆ ಹಾಗೂ ಕುತ್ತಿಗೆಗೆ ಇರಿದು ತನ್ನ ಜತೆ ಬಂದಿದ್ದ ಸಹಚರರೊಂದಿಗೆ ಪರಾರಿಯಾಗಿದ್ದಾನೆ.

ವಿಷಯ ತಿಳಿದು ತಿಲಕ್‍ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಗಂಭೀರವಾಗಿ ಗಾಯಗೊಂಡಿದ್ದ ಕಿಶೋರ್‍ಕುಮಾರ್‍ನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ತಿಲಕ್‍ನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments