ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಸೆ.24- ಗಾಂಜಾ ಕಳ್ಳಸಾಗಾಟ ಮಾಡುತ್ತಿದ್ದ ವ್ಯಕ್ತಿ ಪೊಲೀಸರ ಕಾರ್ಯಾಚರಣೆ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದಾನೆ.ಆಂಧ್ರ ಪ್ರದೇಶ ಮೂಲದ ಡೇವಿಡ್ (34) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅನೇಕಲ್ ತಾಲ್ಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮರಸೂರು ಗ್ರಾಮದ ಸಮೀಪ ಕಾರಿನಲ್ಲಿ ವ್ಯಕ್ತಿಯೊಬ್ಬ 800 ಕೆಜಿ ಗಾಂಜಾ ಸಾಗಣೆ ಮಾಡುತ್ತಿದ್ದಾನೆಂಬ ಮಾಹಿತಿ ಸೂರ್ಯನಗರ ಪೊಲೀಸರಿಗೆ ಲಭಿಸಿದೆ.

ಈ ಆಧಾರದ ಮೇಲೆ ವೃತ್ತ ನಿರೀಕ್ಷಕ ಸೈಮನ್ ಅವರು ಕಾನ್‍ಸ್ಟೇಬಲ್ ಹನುಮಯ್ಯ ಮತ್ತಿತರ ಸಿಬ್ಬಂದಿಗಳೊಂದಿಗೆ ತೆರಳಿ ಕಾರನ್ನು ಚೇಸ್ ಮಾಡಿದ್ದಾರೆ.ಕಾರನ್ನು ಅಡ್ಡಗಟ್ಟಿದ ತಕ್ಷಣ ಆರೋಪಿ ಡೇವಿಡ್‍ನನ್ನು ಬಂಧಿಸಲು ಕಾನ್‍ಸ್ಟೇಬಲ್ ಹನುಮಯ್ಯ ಮುಂದಾಗುತ್ತಿದ್ದಂತೆ ಈತ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಕೂಡಲೇ ವೃತ್ತ ನಿರೀಕ್ಷಕ ಸೈಮನ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಸಿ ಎಚ್ಚರಿಕೆ ನೀಡಿದರೂ ಇವರ ಮಾತನ್ನು ಲೆಕ್ಕಿಸದೆ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ವೃತ್ತ ನಿರೀಕ್ಷಕರು ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿದೆ.

ಗುಂಡೇಟಿನಿಂದ ಗಾಯಗೊಂಡ ಡೇವಿಡ್‍ನನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್‍ಪಿ ರವಿ ಡಿ.ಚನ್ನಣ್ಣನವರ್, ಡಿವೈಎಸ್‍ಪಿ ನಂಜುಂಡೇಗೌಡರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments