ಕ್ರಿಕೆಟ್ ಬೆಟ್ಟಿಂಗ್ : ಇಬ್ಬರ ಬಂಧನ 40 ಲಕ್ಷ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ 40 ಲಕ್ಷ ಹಣ ವಶಪಡಿಸಿಕೊಂಡರೆ ಮತ್ತೊಂದು ಪ್ರಕರಣದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನಲ್ಲಿ ನಡೆಯುತ್ತಿದ್ದ ಸಟ್ಟಾ ಬಾಜಿ ಪ್ರಕರಣವನ್ನು ಬಯಲಿಗೆಳೆದಿ ದ್ದಾರೆ.

ಟಿ-20 ಕ್ರಿಕೆಟ್ ಪಂದ್ಯಾವಳಿ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಸಂದೀಪ್ ಮತ್ತು ರಾಣಾನನ್ನು ಬಂಧಿಸಲಾಗಿದ್ದು, ಇನ್ನು ಹಲವು ಬುಕ್ಕಿಗಳ ಬಂಧನಕ್ಕೆ ತನಿಖೆ ಮುಂದುವರೆದಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯಾವಳಿ ವೇಳೆ ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಬೆಟ್ಟಿಂಗ್‍ನಲ್ಲಿ ತೊಡಗಿದ್ದಾಗ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 40 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸಿಸಿಬಿಪೊಲೀಸರು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿಯನ್ನು ಬಂಧಿಸಿದ್ದಾರೆ. ಭಾರೀ ಮೊತ್ತದ ಬೆಟ್ಟಿಂಗ್‍ನ ಸಿದ್ದತೆಯಲ್ಲಿ ತೊಡಗಿದ್ದ ಅಲಿ ಈಗಾಗಲೇ ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದ ಎನ್ನಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಸಟ್ಟಾ ಬಾಜಿ ದಂಧೆ ಎಂಬುದು ಗೊತ್ತಾಗಿದೆ. ದುಬೈ ಬುಕ್ಕಿಗಳನ್ನು ಸಂಪರ್ಕಿಸಿ ಅಲ್ಲಿಂದಲೇ ಬೆಟ್ಟಿಂಗ್ ಭಾರೀ ಹಣ ವಹಿವಾಟಿಗೆ ಅಲಿ ಸಂಚು ರೂಪಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಅಲಿ ಕೆಪಿಎಲ್‍ನ ಇತರ ತಂಡದ ಆಟಗಾರರೊಂದಿಗೂ ಸಂಪರ್ಕ ಸಾಧಿಸಿದ್ದ ಎಂಬ ಮಾಹಿತಿ ಬಹಿರಂಗ ವಾಗಿದ್ದು, ಕ್ರಿಕೆಟ್ ಲೋಕದ ಮೇಲೆ ಕರಿನೆರಳು ಚಾಚಿಕೊಂಡಿದೆ.

Facebook Comments