ದರೋಡೆಗೆ ಸಂಚು : ರೌಡಿ ಸೈಕಲ್ ರವಿಯ 5 ಸಹಚರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, – ಸಾರ್ವಜನಿಕರ ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಸೈಕಲ್ ರವಿಯ ಐದು ಮಂದಿ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಜಕ್ಕೂರು ಲೇಔಟ್‍ನ ಗಂಗಾಧರ್(30), ಶಿವಕುಮಾರ್(30), ಅರ್ಜುನ(30), ಮಂಜುನಾಥ(31) ಮತ್ತು ನರೇಶ್ (29) ಬಂಧಿತರು.

ನಿನ್ನೆ ರಾತ್ರಿ 10.30ರ ಸುಮಾರಿನಲ್ಲಿ ಅಮೃತಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಲುಂಬಿಣಿ ಗಾರ್ಡನ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಮಾರಕಾಸ್ತ್ರಗಳನ್ನಿಟ್ಟುಕೊಂಡು ಸಾರ್ವಜನಿಕರಿಂದ ನಗದು-ಚಿನ್ನ ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿಯ ಪೊಲೀಸ್ ಇನ್ಸ್‍ಪೆಕ್ಟರ್ ಕೇಶವಮೂರ್ತಿ ಮತ್ತು ಸಿಬ್ಬಂದಿಗಳು ಸ್ಥಳದ ಮೇಲೆ ದಾಳಿ ಮಾಡಿ ರೌಡಿ ಸೈಕಲ್ ರವಿಯ ಸಹಚರರನ್ನು ಬಂಧಿಸಿ ಕಾರು, ಮಾರಕಾಸ್ತ್ರ, ಖಾರದ ಪುಡಿ ಪೊಟ್ಟಣ ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು , ತನಿಖೆ ಮುಂದುವರೆದಿದೆ.

ಆರೋಪಿಗಳ ಪೈಕಿ ಗಂಗಾಧರ್ ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ ಸೇರಿದಂತೆ 3 ಪ್ರಕರಣಗಳು ದಾಖಲಾಗಿದ್ದರೆ, ಶಿವಕುಮಾರ್ ವಿರುದ್ಧ ಕೊಲೆ, ಕೊಲೆಯತ್ನ ಇತರೆ 2 ಪ್ರಕರಣಗಳು ದಾಖಲಾಗಿವೆ. ಆರೋಪಿ ಅರ್ಜುನ್ ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ , ಮತ್ತು ಮಂಜುನಾಥ್ ವಿರುದ್ಧ ಕೊಲೆಯತ್ನ , ಹಲ್ಲೆ ಹಾಗೂ ನರೇಶ್ ವಿರುದ್ಧ ಈ ಹಿಂದೆ ಎರಡು ದರೋಡೆ ಪ್ರಕರಣ ದಾಖಲಾಗಿರುತ್ತದೆ.

Facebook Comments