ಜೈಲಿನಲ್ಲಿ ಕುಳಿತೇ ಬೆದರಿಕೆ ಹಾಕಿದ ರೌಡಿ ಸಹಚರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.5- ಜೈಲಿನಲ್ಲಿದ್ದುಕೊಂಡೆ ಸಹಚರರ ಮೂಲಕ ರೌಡಿ ಪ್ರಮೋದ್ ಅಲಿಯಾಸ್ ರಿಯಾದ್ ಕುಟುಂಬದ ಮೇಲೆ ದಮ್ಕಿ ಹಾಕಿ ಹಲ್ಲೆ ನಡೆಸಿದ ಐದು ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸುಬ್ರಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆಯ ಚೌಡೇಶ್ವರಿ ನಗರದ ಅಭಿಷೇಕ್(21), ಕುರುಬರಹಳ್ಳಿಯ ಸುನಿಲ್ ದೇಸಾಯಿ (22), ಮಾರೇನಹಳ್ಳಿ ಪ್ರಬೀಣ್ (20), ಮಧುಕುಮಾರ್ (20) ಮತ್ತು ಶಿವನಗರದ ನವೀನ್ (23) ಬಂಧಿತರಾಗಿದ್ದು ಇವರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಲಾಂಗ್, ಮೂರು ಬೈಕ್, ಎರಡು ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದರೋಡೆ ಪ್ರಕರಣದಲ್ಲಿ ಸುಬ್ರಮಣ್ಯಪುರ ಠಾಣೆಯ ರೌಡಿ ಶೀಟರ್ ಪ್ರಮೋದ್ ಜೈಲಿನಲ್ಲಿದ್ದಾನೆ. ಮೊಬೈಲ್ ಫೋನ್ ವಿಚಾರಕ್ಕೆ ಜೈಲಿನಲ್ಲಿರುವ ಮತ್ತೊಬ್ಬ ರೌಡಿ ಜತೆ ಜಗಳವಾಡಿ ಹಲ್ಲೆ ಮಾಡಿರುತ್ತಾನೆ.  ಈ ದ್ವೇಷದಿಂದ ಇಬ್ಬರು ರೌಡಿಗಳು ಗಲಾಟೆ ಮಾಡಿಕೊಂಡಿದ್ದು, ಪ್ರಮೋದ್ ಮೇಲೆಯೂ ಹಲ್ಲೆ ನಡೆದಿದೆ. ಇದೇ ವೈಷಮ್ಯದಿಂದ ಪ್ರಮೋದ್‍ನನ್ನು ಇಷ್ಟಕ್ಕೆ ಬಿಟ್ಟರೆ ಸರಿ ಹೋಗುವುದಿಲ್ಲವೆಂದು ರೌಡಿ ತನ್ನ ಸಹಚರರಿಗೆ ಜೈಲಿನಲ್ಲಿದ್ದುಕೊಂಡೆ ಪ್ರಮೋದ್ ಕುಟುಂಬದವರನ್ನು ಬೆದರಿಸಿ ಕೊಲೆ ಮಾಡಲು ಸೂಚಿಸಿದ್ದನು.

ಸೆ. 24ರಂದು ರಾತ್ರಿ 8ಗಂಟೆ ಸುಮಾರಿನಲ್ಲಿ ರಾಜಾಜಿನಗರ ಎರಡನೇ ಹಂತ ಎ ಬ್ಲಾಕ್‍ನಲ್ಲಿರುವ ಪ್ರಮೋದ್ ಮನೆ ಬಳಿ ಐದಾರು ಮಂದಿ ಗುಂಪು ತೆರಳಿದೆ. ಮನೆಯಲ್ಲಿ ಪ್ರಮೋದ್ ಕುಟುಂಬದವರು ಸಂಬಂಧಿಕರೊಂದಿಗೆ ಊಟ ಮಾಡುತ್ತಿದ್ದಾಗ ಇಬ್ಬರು ಮನೆಯೊಳಗೆ ಹೋಗಿ ನಿಮ್ಮ ಮಗ ನಮ್ಮ ಬಾಸ್‍ಗೆ ಜೈಲಿನಲ್ಲಿ ಅವಾಜ್ ಹಾಕುತ್ತಾನಂತೆ ಅವರ ತಂಟೆಗೆ ಹೋದರೆ ನಿಮ್ಮ ಕುಟುಂಬ ನಾಶ ಮಾಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿ ಲಾಂಗ್‍ನಿಂದ ಹಲ್ಲೆಗೆ ಮುಂದಾಗಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು.

ಪ್ರಮೋದ್ ತಂದೆ ಕೇಶವ್ ಹೊರಗೆ ಬಂದು ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಆರೇಳು ಮಂದಿ ಬೈಕ್‍ನಲ್ಲಿ ಲಾಂಗ್ ಸಮೇತ ಬಂದಿದ್ದರೆಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆರೋಪಿಗಳು ಪ್ರಮೋದ್ ತಂದೆ ಕೇಶವ್, ತಾಯಿ ಶಾರದಾ ಅವರ ಮೇಲೆ ಕೊಲೆ ಯತ್ನ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಕೊನೆಗೂ ಐದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳಾದ ಚರಣ್ ಮತ್ತು ಮಂಜುನಾಥ್ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯಪ್ರಗತಿಯಲ್ಲಿದೆ.

Facebook Comments