ಬೆಂಗಳೂರಲ್ಲಿ ಘರ್ಜಿಸಿದ ಪೊಲೀಸರ ಪಿಸ್ತೂಲು, ರೌಡಿಶೀಟರ್ ಗಳಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.6- ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ರಿವಾಲ್ವರ್ ಸದ್ದು ಮಾಡಿದ್ದು, ರೌಡಿಶೀಟರ್ ಹಾಗೂ ಹಳೆ ಆರೋಪಿ ಜಾಲಹಳ್ಳಿ ಪೊಲೀಸರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ರೌಡಿಶೀಟರ್ ವಿಜಯ್ ಅಲಿಯಾಸ್ ದಡಿಯಾ ವಿಜಿ (24) ಮತ್ತು ಹಳೆ ಆರೋಪಿ ಹನುಮಂತ ಅಲಿಯಾಸ್ ಮೋರಿ ಹನಿ (24) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚೆಗೆ ಸರಗಳ್ಳತನ, ಕನ್ನಗಳವು, ದ್ವಿಚಕ್ರ ವಾಹನ ಕಳವು, ದರೋಡೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜಲಹಳ್ಳಿ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ವಿಜಯ್ ಮತ್ತು ಹನುಮಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರಿಬ್ಬರು ಹಲವು ಕಡೆ ದರೋಡೆ, ಸರಗಳ್ಳತನ, ಕನ್ನಗಳವು ಮುಂತಾದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದುಬಂದಿದೆ.

ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಕಳ್ಳತನ ಮಾಡಿ ಮಾಲುಗಳನ್ನು ಬಚ್ಚಿಟ್ಟಿರುವ ಜಾಗ ತೋರಿಸುವುದಾಗಿ ತಿಳಿಸಿದ ಮೇರೆಗೆ ಇನ್‍ಸ್ಪೆಕ್ಟರ್ ಯಶವಂತ್ ಮತ್ತು ಪಿಎಸ್‍ಐ ಲೇಪಾಕ್ಷಿಮೂರ್ತಿ ಅವರು ಸಿಬ್ಬಂದಿಯೊಂದಿಗೆ ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದಿದ್ದಾರೆ. ಮಾಲನ್ನು ವಶಕ್ಕೆ ಪಡೆಯಲು ಇಂದು ಮುಂಜಾನೆ 6 ಗಂಟೆ ಸುಮಾರಿನಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕೂಲಿನಗರದ ಬ್ರಿಡ್ಜ್ ಹತ್ತಿರ ಹೋಗುತ್ತಿದ್ದಂತೆ ಆರೋಪಿ ವಿಜಯ್ ಹಾಗೂ ಹನುಮಂತ ಬೆಂಗಾವಲಿಗಿದ್ದ ಪೊಲೀಸ್ ಹೆಡ್‍ಕಾನ್ಸ್‍ಟೇಬಲ್‍ಗಳಾದ ಶ್ರೀನಿವಾಸಮೂರ್ತಿ ಮತ್ತು ನರೇಶ್ ಅವರನ್ನು ತಳ್ಳಿ ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ.

ತಕ್ಷಣ ಇನ್‍ಸ್ಪೆಕ್ಟರ್ ಯಶವಂತ್ ಮತ್ತು ಪಿಎಸ್‍ಐ ಲೇಪಾಕ್ಷಿಮೂರ್ತಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಅವರುಗಳ ಎಚ್ಚರಿಕೆಯನ್ನೂ ಲೆಕ್ಕಿಸದೆ ಆರೋಪಿಗಳು ಪೊಲೀಸರ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಇನ್‍ಸ್ಪೆಕ್ಟರ್ ಮತ್ತು ಪಿಎಸ್‍ಐ ಅವರು ಗುಂಡುಗಳನ್ನು ಹಾರಿಸಿದ್ದಾರೆ.

ಈ ಗುಂಡುಗಳು ವಿಜಯ್‍ನ ಎಡಗಾಲಿಗೆ ಹಾಗೂ ಹನುಮಂತನ ಬಲಗಾಲಿಗೆ ತಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಈ ಇಬ್ಬರನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ವಿಜಯ್ ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ಹನುಮಂತ ನಂದಿನಿಲೇಔಟ್ ಪೊಲೀಸ್ ಠಾಣೆಯ ಹಳೆಯ ಆರೋಪಿಯಾಗಿದ್ದಾನೆ.

ಈ ಇಬ್ಬರು ಆರೋಪಿಗಳ ಮೇಲೆ ಬಸವೇಶ್ವರನಗರ, ನಂದಿನಿ ಲೇಔಟ್, ರಾಜಗೋಪಾಲನಗರ, ಮಹಾಲಕ್ಷ್ಮಿ ಲೇಔಟ್, ಪೀಣ್ಯ, ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಸುಮಾರು 15ಕ್ಕೂ ಹೆಚ್ಚು ದರೋಡೆ ಸಂಚು, ಸರಗಳ್ಳತನ, ದರೋಡೆ, ಕನ್ನಗಳವು ಪ್ರಕರಣಗಳು ದಾಖಲಾಗಿವೆ. ಈ ಇಬ್ಬರು ಆರೋಪಿಗಳು ಸೇರಿಕೊಂಡು ಕಳೆದ ವಾರದ ಹಿಂದೆ ರಾಜ್‍ಕುಮಾರ್ ಸಮಾಧಿ ಹತ್ತಿರ ನಾಗರತ್ನ ಎಂಬುವವರ ಸರವನ್ನು ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿಗಳು ಜೈಲಿನಲ್ಲಿರುವ ಅಶೋಕ್ ಅಲಿಯಾಸ್ ಸಂಪತ್ ಅಲಿಯಾಸ್ ಮತ್ತಿಯ ಸಹಚರರಾಗಿದ್ದು, ಆತನಿಗಾಗಿ ದರೋಡೆ, ಕಳ್ಳತನದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಅಶೋಕ್ ಅಲಿಯಾಸ್ ಸಂಪತ್ ಅಲಿಯಾಸ್ ಮತ್ತಿಯ ಜೈಲಿನಲ್ಲಿದ್ದು, ಈತನ ಮೇಲೆ ಬೆಂಗಳೂರು ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 20ಕ್ಕೂ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಇನ್ನೂ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Facebook Comments