ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ಮುಂದೆ ದಾಂಧಲೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20- ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಮೂವರು ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದ ವೇಳೆ ಗುಂಪೊಂದು ಆಗಮಿಸಿ ಆರೋಪಿಗಳ ಬಿಡುಗಡೆ ಒತ್ತಾಯಿಸಿದ್ದರಿಂದ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಕಾಟನ್‍ಪೇಟೆ ಮತ್ತು ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಉರುಸ್ ನಡೆದಿತ್ತು. ಆ ಸಂದರ್ಭದಲ್ಲಿ ಮೂರು ಮಂದಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾರೆ. ಅವರ ಕೈಯ್ಯಲ್ಲಿ ಲಾಂಗ್, ಮಚ್ಚುಗಳಿವೆ ಎಂದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.

ಕೆಲ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಮಧ್ಯರಾತ್ರಿ 1.30ರ ಸುಮಾರಿಗೆ 30 ರಿಂದ 40 ಮಂದಿಯ ಗುಂಪು ಠಾಣೆ ಬಳಿ ಬಂದಿದ್ದು, ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿದೆ ಎನ್ನಲಾಗಿದೆ. ಈ ವೇಳೆ ಬಹುತೇಕ ಸಿಬ್ಬಂದಿಗಳು ರಾತ್ರಿ ಗಸ್ತಿಗೆ ತೆರಳಿದ್ದು, ಒಂದಿಬ್ಬರು ಮಾತ್ರ ಠಾಣೆಯಲ್ಲಿದ್ದರು. ಗುಂಪು ಠಾಣೆ ಬಳಿ ಬರುತ್ತಿದ್ದಂತೆ ಹೊರಗಡೆ ಇದ್ದ ಸಿಬ್ಬಂದಿ ಠಾಣೆಗೆ ವಾಪಸ್ಸಾಗಿದ್ದಾರೆ.

ಈ ಸಮಯದಲ್ಲಿ ಕೆಲ ಕಿಡಿಗೇಡಿಗಳು ಠಾಣೆ ಹೊರಗಡೆ ನಿಲ್ಲಿಸಿದ್ದ ಹಳೇ ವಾಹನಗಳನ್ನು ಜಖಂಗೊಳಿಸಲು, ಕಲ್ಲು ತೂರಾಟ ನಡೆಸಲು ಯತ್ನಿಸಿತ್ತು. ತಕ್ಷಣವೇ ಬಂದ ಇತರ ಸಿಬ್ಬಂದಿಗಳು ಗುಂಪನ್ನು ನಿಯಂತ್ರಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ತಹಬದಿಯಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದೆ ಸಿಟಿ ಮಾರ್ಕೆಟ್ ಶಾಂತಿಯುತವಾಗಿದೆ.

ಘಟನೆ ಕುರಿತು ಈ ಸಂಜೆಯೊಂದಿಗೆ ಮಾತನಾಡಿರುವ ಡಿಸಿಪಿ ರಮೇಶ್ ಅವರು, ಕೆಲವರು ಠಾಣೆ ಬಳಿ ಬಂದು ವಿಚಾರಣೆ ನಡೆಸುತ್ತಿದ್ದ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಉಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ . ಆರೋಪಿಗಳ ವಿಚಾರಣೆಯನ್ನು ಮುಂದುವರೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Facebook Comments