ವೃದ್ಧೆಯರ ಗಮನ ಬೇರೆಡೆ ಸೆಳೆದು ಆಭರಣ ದೋಚುತ್ತಿದ್ದ ವಂಚಕನ ಸೆರೆ, 30 ಲಕ್ಷ ಮೌಲ್ಯದ ಆಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.21- ಒಂಟಿ ವೃದ್ಧೆಯರ ಗಮನ ಬೇರೆಡೆ ಸೆಳೆದು ಮೋಸದಿಂದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಬಾಗಲಗುಂಟೆ ಪೊಲೀಸರು ಬಂಧಿಸಿ 30 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಜಿಲ್ಲೆ, ಹುರುಳಿ ಚಿಕ್ಕನಗಳ್ಳಿ ನಿವಾಸಿ ಮಂಜ ಅಲಿಯಾಸ್ ಹೊಟ್ಟೆ ಮಂಜ(36) ಬಂಧಿತ ಆರೋಪಿಯಾಗಿದ್ದು, ಈತನಿಂದ 880 ಗ್ರಾಂ ತೂಕದ ಚಿನ್ನಾಭರಣ ಮತ್ತು ಒಂದು ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ.

ಮಲ್ಲಸಂದ್ರದ ಪೈಪ್‍ಲೈನ್ ನಿವಾಸಿ ಚನ್ನಮ್ಮ(72) ಎಂಬುವರು ಸೆ.14ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಮನೆ ಸಮೀಪದ ಹೋಟೆಲ್‍ಗೆ ತಿಂಡಿ ತೆಗೆದುಕೊಂಡು ಮಲ್ಲಸಂದ್ರ ಸರ್ಕಲ್‍ನಿಂದ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ತಮಗೆ ಉಚಿತವಾಗಿ ರೇಷನ್ ಕೊಡಿಸುತ್ತೇನೆ ಎಂದು ಹೇಳಿ ತನ್ನ ಬೈಕ್‍ನಲ್ಲಿ ಕೂರಿಸಿಕೊಂಡು ಹೋಗಿದ್ದನು.

ಸ್ವಲ್ಪ ದೂರ ಹೋದ ನಂತರ ಮೈಮೇಲೆ ಚಿನ್ನಾಭರಣವಿದ್ದರೆ ರೇಷನ್ ಕೊಡುವುದಿಲ್ಲ. ತಮ್ಮ ಒಡವೆಗಳನ್ನು ಬಿಚ್ಚಿ ಮನೆಯಲ್ಲಿ ಇಟ್ಟುಬನ್ನಿ ಎಂದು ಮನೆ ಬಳಿ ಕರೆದೊಯ್ದಿದ್ದನು.
ವೃದ್ಧೆ ಚನ್ನಮ್ಮ ಈತನ ಮಾತನ್ನು ಬನ್ನಿ ಮೈಮೇಲಿದ್ದ ಆಭರಣಗಳನ್ನು ಕಳಚಿ ಮನೆಯಲ್ಲಿಟ್ಟು ಬೀಗ ಹಾಕದೆ ಬಾಗಿಲು ಚಿಲಕ ಹಾಕಿಕೊಂಡು ಮತ್ತೆ ಆತನೊಂದಿಗೆ ತೆರಳಿದ್ದ.

ಈ ವೇಳೆ ರೇಷನ್ ಅಂಗಡಿ ಮುಂದೆ ಜನ ಇದ್ದಾರೆ. ಇಲ್ಲೇ ಕುಳಿತಿರಿ ಬರುತ್ತೇನೆಂದು ತಿಳಿಸಿದ ವಂಚಕ, ನೇರ ವೃದ್ಧೆ ಮನೆಗೆ ಹೋಗಿ ಕಳಚಿಟ್ಟಿದ್ದ 30 ಗ್ರಾಂ ತೂಕದ ಆಭರಣಗಳನ್ನು ಕದ್ದು ಪರಾರಿಯಾಗಿದ್ದನು.

ಈ ಸಂಬಂಧ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೊನೆಗೂ ಆರೋಪಿಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  ಆರೋಪಿಯ ಬಂಧನದಿಂದ ಆರ್‍ಟಿನಗರದ ಎರಡು ಪ್ರಕರಣ, ಬೇಗೂರು, ಹೊಳೆನರಸೀಪುರ, ಬಾಗಲಗುಂಟೆ, ಮಂಗಳೂರು ದಕ್ಷಿಣ, ಮಣಿಪಾಲ್, ತ್ಯಾಮಗೊಂಡ್ಲು, ಅಮೃತಹಳ್ಳಿ ಠಾಣೆಯ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 9 ಮೋಸದ ಪ್ರಕರಣಗಳು ಹಾಗೂ ಸೋಲದೇವನಹಳ್ಳಿಯ 2 ಮನೆಗಳ್ಳತನ ಮತ್ತು ಬಾಗಲಗುಂಟೆಯ ಮೂರು ಮನೆಗಳ್ಳತನ ಪ್ರಕರಣ ಸೇರಿ ಒಟ್ಟು 14 ಪ್ರಕರಣಗಳು ಪತ್ತೆಯಾದಂತಾಗಿದೆ.

ಆರೋಪಿಯು ಒಂಟಿಯಾಗಿರುವ ವೃದ್ಧೆಯನ್ನು ಗುರುತಿಸಿ ಅವರನ್ನು ಗುರಿಯಾಗಿಸಿಕೊಂಡು ಅವರ ಗಮನ ಬೇರೆಡೆ ಸೆಳೆದು ಚಿನ್ನಾಭರಣಗಳನ್ನು ಮೋಸದಿಂದ ಕಳವು ಮಾಡುತ್ತಿದುದ್ದು ವಿಚಾರಣೆಯಿಂದ ತಿಳಿದುಬಂದಿದೆ.

Facebook Comments