ಬಿಎಂಟಿಸಿ ಸಿಬ್ಬಂದಿಗೆ ಫೆ.1ರಿಂದ ಪಾರದರ್ಶಕ ಕರ್ತವ್ಯ ನಿಯೋಜನಾ ಪದ್ದತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.1- ಲಾಕ್‍ಡೌನ್ ಬಳಿಕ ಸರ್ಕಾರದ ಮಾರ್ಗ ಸೂಚಿಯಂತೆ ಬಸ್ ಕಾರ್ಯಾಚರಣೆ ಸಂಬಂಧ ಬಿಎಂಟಿಸಿ ಸಿಬ್ಬಂದಿಗೆ ಕರ್ತವ್ಯ ನಿಯೋಜನಾ ಪದ್ದತಿಯನ್ನು ಫೆ.1ರಿಂದ ಪಾರದರ್ಶಕವಾಗಿ ಜಾರಿಗೊಳಿಸಲು ಸಂಸ್ಥೆ ನಿರ್ಧರಿಸಿದೆ.

ಪ್ರಯಾಣಿಕರ ದಟ್ಟಣೆ/ಬೇಡಿಕೆಗನುಗುಣವಾಗಿ ಸಾರಿಗೆಗಳನ್ನು ಹಂತ ಹಂತವಾಗಿ ಹೆಚ್ಚಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ, ಕೊರೊನಾದಿಂದಾಗಿ ಪ್ರಯಾಣಿಕರ ಕೊರತೆ ಎದುರಿಸುತ್ತಿರುವ ಬೆಂ.ಮ.ಸಾ ಸಂಸ್ಥೆಯ ಬಸ್ಸುಗಳ ಕಾರ್ಯಾಚರಣೆ ಮತ್ತು ಚಾಲನಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವ ಸಲುವಾಗಿ ಹೊಸದಾಗಿ ಕರ್ತವ್ಯ ನಿಯೋಜನಾ ಪದ್ದತಿಯನ್ನು ಜಾರಿಗೆ ತರುವ ಬಗ್ಗೆ ಯೋಜನೆಯನ್ನು ರೂಪಿಸಲಾಗಿದೆ.

ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಚಾಲನಾ ಸಿಬ್ಬಂದಿಗಳ ಸೇವಾ ಹಿರಿತಕ್ಕನುಗುಣವಗಿ ಜೇಷ್ಠತಾ ಪಟ್ಟಿಯನ್ನು ಹುದ್ದೆವಾರು ತಯಾರಿಸಲಾಗುವುದು. ಘಟಕದಲ್ಲಿನ ಎಲ್ಲಾ ಅನುಸೂಚಿಗಳಿಗೆ ಪ್ರತ್ಯೇಕ ಮಾರ್ಗದ ಬ್ಲಾಕ್‍ಗಳನ್ನು ಹಾಗೂ ಚಾಲನಾ ಸಿಬ್ಬಂದಿಯ ಜೇಷ್ಠತಾ ಪಟ್ಟಿಯನ್ನು ಮುಂಚಿತವಾಗಿ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುವುದು.

ಕೌನ್ಸೆಲಿಂಗ್ ಸಮಯದಲ್ಲಿ ಚಾಲನಾ ಸಿಬ್ಬಂದಿಗಳಿಗೆ ತಮಗೆ ಸೂಕ್ತವಾದ ಮಾರ್ಗ ಹಾಗೂ ವಾರದ ರಜೆಯನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.  ಕರ್ತವ್ಯ ನಿಯೋಜನೆ ಪದ್ದತಿಯನ್ನು ಅನುಸರಿಸುವಲ್ಲಿ ಸಾಮಾನ್ಯ ಪಾಳಿ ಅನುಸೂಚಿಗಳಿಗೆ ಚಾಲನಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವಾಗ ಕನಿಷ್ಟ ಶೇ.50ರಷ್ಟು ಮಹಿಳಾ ನಿರ್ವಾಹಕಿಯರನ್ನು ನಿಯೋಜಿಸಲು ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Facebook Comments