ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಬಿಎಂಟಿಸಿ ಬಸ್ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.31-ನಗರದ ವಿವಿಧ ಭಾಗಗಳಲ್ಲಿ ಜನರು ಹೊಸ ವರ್ಷಾಚರಣೆಗೆ ಸೇರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಇಂದು ತಡರಾತ್ರಿಯವರೆಗೂ ಹೆಚ್ಚುವರಿ ಬಸ್ ಸೇವೆಯನ್ನು ಒದಗಿಸಲಿದೆ. ನಗರದ ಪ್ರಮುಖ ಸ್ಥಳಗಳು ಹಾಗೂ ಮೆಟ್ರೋ ನಿಲ್ದಾಣಗಳಿಗೆ ಮಧ್ಯರಾತ್ರಿಯವರೆಗೂ ಬಸ್ ಸೇವೆ ಒದಗಿಸಲಾಗುವುದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮವು ತಡರಾತ್ರಿಯವರೆಗೂ ಮೆಟ್ರೋ ರೈಲು ಸೇವೆ ಒದಗಿಸುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳಿಗೂ ಬಸ್ ಸೇವೆ ಕಲ್ಪಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ಹಲವು ಸ್ಥಳಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಗರದ ವಿವಿಧ ಪ್ರಮುಖ ಸ್ಥಳಗಳಿಗೆ ಬಸ್ ಸೇವೆಯನ್ನು ಕಲ್ಪಿಸಲಾಗಿದೆ.

ವಿಜಯನಗರ ಮೆಟ್ರೋ ನಿಲ್ದಾಣದಿಂದ ಬನಶಂಕರಿ ಮೆಟ್ರೋ ನಿಲ್ದಾಣ, ಉಲ್ಲಾಳ ಉಪನಗರ, ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಕೆಂಗೇರಿ, ಬಿಇಎಂಎಲ್ 5ನೇ ಹಂತ, ಬನಶಂಕರಿ ಮೆಟ್ರೋ ಸ್ಟೇಷನ್‍ನಿಂದ ಕಗ್ಗಲೀಪುರಕ್ಕೆ ತಡರಾತ್ರಿಯವರೆಗೂ ಬಸ್ ಸೇವೆ ಒದಗಿಸಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.

ಜಯನಗರ ಮೆಟ್ರೋ ಸ್ಟೇಷನ್‍ನಿಂದ ವಡ್ಡರಹಳ್ಳಿ, ಜಂಬೂ ಸವಾರಿ ದಿಣ್ಣೆ, ಗೊರಗುಂಟೆ ಪಾಳ್ಯ, ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ವಿದ್ಯಾರಣ್ಯಪುರ, ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಚಿಕ್ಕಬಾಣವಾರ, ಎಸ್.ವಿ. ಮೆಟ್ರೋ ನಿಲ್ದಾಣದಿಂದ ವೈಟ್‍ಫೀಲ್ಡ್ ಟಿಟಿಎಂಸಿ, ಕೆ.ಆರ್.ಪುರಂ, ಸೆಂಟ್ರಲ್ ಸಿಲ್ಕ್ ಬೋರ್ಡ್‍ವರೆಗೆ ತಡರಾತ್ರಿವರೆಗೆ ಬಸ್ ಸೇವೆ ಒದಗಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Facebook Comments