ಬಿಬಿಎಂಟಿಸಿ ಬಸ್ ಅವಾಂತರ, ಐದು ಕಾರುಗಳು ಜಖಂ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.10- ಸುಮನಹಳ್ಳಿ ಬಿಎಂಟಿಸಿ ಬಸ್ ದುರಂತ ಮಾಸುವ ಮುನ್ನವೇ ಮತ್ತೊಂದು ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.  ಜಯನಗರದ ಈಸ್ಟ್‍ಎಂಡ್ ಸರ್ಕಲ್ ಬಳಿಯ ರೆಡ್ಡಿ ನರ್ಸಿಂಗ್ ಹೋಂ ಸಮೀಪ ತಾಂತ್ರಿಕ ದೋಷದಿಂದ ಬಿಎಂಟಿಸಿ ಬಸ್ ಏಕಾಏಕಿ ರಸ್ತೆ ಮಧ್ಯೆ ನಿಂತ ಹಿನ್ನೆಲೆಯಲ್ಲಿ ಹಿಂದೆ ಬರುತ್ತಿದ್ದ ಕಾರುಗಳು ಒಂದಕ್ಕೊಂದು ಗುದ್ದಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ ಬಿಎಂಟಿಸಿ ಬಸ್ಸೊಂದು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ದಿಢೀರನೆ ರಸ್ತೆ ಮಧ್ಯೆ ನಿಂತ ಹಿನ್ನೆಲೆಯಲ್ಲಿ ಹಿಂದೆ ಬರುತ್ತಿದ್ದ ಕಾರುಗಳು ಒಂದರ ಹಿಂದೆ ಒಂದು ಡಿಕ್ಕಿ ಹೊಡೆದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ವೇಳೆ ಐದು ಕಾರುಗಳು ಜಖಂಗೊಂಡಿದ್ದು, ಸ್ಥಳಕ್ಕೆ ಮೈಕೋ ಲೇಔಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದಾಗಿ ಈ ಭಾಗದಲ್ಲಿ ಕೆಲಕಾಲ ಟ್ರಾಫಿಕ್‍ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೈಕೋ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments