ನಂದೀಶ್‍ರೆಡ್ಡಿಗೆ ಬಿಎಂಟಿಸಿ ಅಧ್ಯಕ್ಷ ಪಟ್ಟ, ಅತೃಪ್ತರ ಸಿಟ್ಟು ತಣಿಸಲು ಸಿಎಂ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.17- ಉಪ ಚುನಾವಣೆಗೆ ಟಿಕೆಟ್ ಸಿಗದವರು ಅಸಮಾಧಾನಗೊಂಡು ಭಿನ್ನಮತ ಸಾರಬಹುದು ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಅತೃಪ್ತರ ಮೂಗಿಗೆ ತುಪ್ಪ ಸವರಿದ್ದಾರೆ.  ಈ ಹಿಂದೆ 8 ಮಂದಿ ಭಿನ್ನಮತೀಯರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಲಾಗಿತ್ತು. ಆದರೆ ಒಂದು ವಾರವಾದರೂ ಅಧಿಕಾರ ಸ್ವೀಕರಿಸಲು ಕೆಲವರು ಹಿಂದೇಟು ಹಾಕಿದ ಪರಿಣಾಮ ಇದೀಗ ಪುನಃ ರಾಜ್ಯ ಸರ್ಕಾರ ಅತೃಪ್ತರ ಮನವೊಲಿಸುವ ಪ್ರಯತ್ನ ಮುಂದುವರೆಸಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಕೆ.ಆರ್.ಪುರಂನ ಮಾಜಿ ಶಾಸಕ ನಂದೀಶ್ ರೆಡ್ಡಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ(ಬಿಎಂಟಿಸಿ) ಅಧ್ಕಕ್ಷರನ್ನಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಈ ಹಿಂದೆ ನಂದೀಶ್ ರೆಡ್ಡಿ ಅವರನ್ನು ಬಿಎಂಟಿಸಿಯ ಉಪಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸ್ಥಾನಮಾನವನ್ನು ನೀಡಲಾ ಗಿತ್ತು.ಆದರೆ ಕಳೆದ ಒಂದು ವಾರ ಕಳೆದರೂ ನಂದೀಶ್ ರೆಡ್ಡಿ ಅಧಿಕಾರ ಸ್ವೀಕರಿಸಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಅವರಿಗೆ ಬಿಬಿಎಂಟಿಸಿ ಅಧ್ಯಕ್ಷ ಸ್ಥಾನ ನೀಡಿ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ನಂದೀಶ್ ರೆಡ್ಡಿ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‍ನಿಂದ ಅನರ್ಹಗೊಂಡಿರುವ ಮಾಜಿ ಶಾಸಕ ಭೈರತಿ ಬಸವರಾಜ್‍ಗೆ ಟಿಕೆಟ್ ನೀಡಲು ಬಿಜೆಪಿ ತೀರ್ಮಾನಿಸಿದೆ.  ಒಂದು ವೇಳೆ ಉಪಚುನಾವಣೆ ಯಲ್ಲಿ ಟಿಕೆಟ್ ಸಿಗದಿದ್ದರೆ ನಂದೀಶ್ ರೆಡ್ಡಿ ಅಸಮಾಧಾನಗೊಂಡು ಪಕ್ಷಾಂತರ ಮಾಡಬಹುದೆಂಬ ಭೀತಿ ಹಿನ್ನೆಲೆಯಲ್ಲಿ ಬಿಎಸ್‍ವೈ ಈ ತೀರ್ಮಾನಕ್ಕೆ ಬಂದಿದ್ದಾರೆ.

ಇನ್ನು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ವಿ.ಎಸ್. ಪಾಟೀಲ್ ಹೊರತುಪಡಿಸಿದರೆ ಉಳಿದ ಯಾರೊಬ್ಬರೂ ಈವರೆಗೂ ಅಧಿಕಾರ ಸ್ವೀಕರಿಸಿಲ್ಲ. ಹಿರೇಕೆರೂರಿನ ಮಾಜಿ ಶಾಸಕ ಯು.ಬಿ.ಬಣಕಾರ್ ಅವರನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ), ಗೋಕಾಕ್‍ನ ಮಾಜಿ ಶಾಸಕ ಅಶೋಕ್ ಪೂಜಾರ್‍ಗೆ ಗಡಿ ಅಭಿವೃದ್ದಿ ಪ್ರಾಧಿಕಾರ,

ಕಾಗವಾಡದ ಮಾಜಿ ಶಾಸಕ ರಾಜು ಕಾಗೆಗೆ ಕಾಡ (ಘಟಪ್ರಭಾ, ಮಲಪ್ರಭಾ ಯೋಜನೆ), ಮಸ್ಕಿಯ ಮಾಜಿ ಶಾಸಕ ಬಸವರಾಜ್ ತುರುವಿ ಹಾಳ್‍ಗೆ ಕಾಡಾ(ತುಂಗಭದ್ರಾ ಯೋಜನಾ ಪ್ರಾಧಿಕಾರ), ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಶರತ್ ಬಚ್ಚೇಗೌಡಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನ, ಗವಿಯಪ್ಪಗೆ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ವಿ.ಎಸ್. ಪಾಟೀಲ್ ಹೊರತುಪಡಿಸಿದರೆ ಬೇರೆ ಯಾರೊಬ್ಬರು ಅಧಿಕಾರ ಸ್ವೀಕರಿಸದಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಅದರಲ್ಲೂ ಶರತ್ ಬಚ್ಚೇಗೌಡ, ರಾಜು ಕಾಗೆ ಮತ್ತಿತರರು ಸರ್ಕಾರ ನೀಡಿದ್ದ ಸ್ಥಾನಮಾನವನ್ನು ತಿರಸ್ಕರಿಸಿದ್ದು, ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷಾಂತರ ಮಾಡುವ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

Facebook Comments