ಬಿಎಂಟಿಸಿಯಲ್ಲಿ ಕೊರೊನಾ ಸಂಚಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.20- ಕೊರೊನಾ ವಾರಿಯರ್ಸ್‍ಗಳಾಗಿ ಕೆಲಸ ಮಾಡುತ್ತಿರುವ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಕೊರೊನಾ ಕಾಟ ಶುರುವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಮಂದಿಗೆ ಸೋಂಕು ಇರುವುದು ಖಚಿತವಾಗಿದ್ದು, ಇನ್ನು ಐದು ಮಂದಿಯ ವರದಿ ನಿರೀಕ್ಷೆಯಲ್ಲಿದೆ.

ಕೋರಮಂಗಲದಲ್ಲಿ ಚಾಲಕ ಹಾಗೂ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಖಚಿತವಾಗಿದ್ದು, ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸೋಂಕು ಖಚಿತವಾಗುವ ಮುನ್ನ ಅವರು ಸುಮಾರು 25 ಮಂದಿ ಸ್ನೇಹಿತರ ಜತೆಗೂಡಿ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದಾರೆ. ಹೀಗಾಗಿ ಅವರ ಜತೆಯಲ್ಲಿದ್ದವರಿಗೂ ಸೋಂಕು ತಗಲುವ ಆತಂಕವಿದೆ.

ಆರನೇ ಡಿಪೋದಲ್ಲಿ ಟಿಸಿಯಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರಿಗೆ, 24 ಮತ್ತು 21ನೇ ಡಿಪೋದಲ್ಲಿ ಕೆಲಸ ಮಾಡುವ ಇಬ್ಬರಿಗೆ ಸೋಂಕು ತಗುಲಿದೆ ಎಂಬ ವರದಿಗಳಿವೆ.

ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಸೋಂಕಿಂತರ ಮಾಹಿತಿಯನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.

ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರಿಗೆ ಸೋಂಕು ಇರುವುದು ಖಚಿತವಾದರೆ ಪ್ರಯಾಣಿಕರು ಬಸ್ ಹತ್ತುವುದಿಲ್ಲ ಎಂಬ ಆತಂಕ ಮತ್ತು ಸಿಬ್ಬಂದಿಗಳು ಕೆಲಸ ಮಾಡಲು ಹೆದರುತ್ತಾರೆ ಎಂಬ ಮುನ್ನೆಚ್ಚರಿಕೆಯಿಂದ ಮಾಹಿತಿಯನ್ನು ಮುಚ್ಚಿಡಲಾಗಿದೆ ಎಂದು ಹೇಳಲಾಗುತ್ತಿದೆ.

Facebook Comments